ತಾಳಿಕೋಟೆ, ರವಿ ಹಂಜ್ ಅವರು ರಚಿಸಿರುವ ಬಸವ ಮಂಟಪ ಪುಸ್ತಕದಲ್ಲಿನ ಆಕ್ಷೇಪಾರ್ಹ ಅಂಶಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀ ಬಸವೇಶ್ವರ ಉತ್ಸವ ಸಮಿತಿ ನೇತೃತ್ವದಲ್ಲಿ ಶನಿವಾರರಂದು ತಾಳಿಕೋಟೆ ತಾಲ್ಲೂಕಿನ ಸಮಸ್ತ ನಾಗರಿಕರು, ಬಸವ ಅಭಿಮಾನಿಗಳು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಪ್ರತಿಭಟನೆ ನಡೆಸಿ ತಹಶಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಮಾತನಾಡಿ ಬಸವ ಮಂಟಪ ಪುಸ್ತಕದಲ್ಲಿನ ಕೆಲವು ಬರಹಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಆಕ್ಷೇಪಗಳಿಗೆ ಕಾರಣವಾಗಿದ್ದು, ಸಮಾಜದ ಶಾಂತಿ, ಸೌಹಾರ್ದತೆ, ಪರಸ್ಪರ ಗೌರವ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ಆತಂಕ ಮೂಡಿಸಿವೆ. ಸಾಹಿತ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಪ್ರಮುಖ ಮೌಲ್ಯಗಳಾಗಿದ್ದರೂ, ಸಮಾಜದ ಶಾಂತಿ ಹಾಗೂ ವ್ಯಕ್ತಿಗಳ ಗೌರವವನ್ನು ಕಾಪಾಡುವುದು ಅಷ್ಟೇ ಮುಖ್ಯವಾಗಿದೆ. ಯಾವುದೇ ಕೃತಿಯಲ್ಲಿನ ಬರಹಗಳು ಕಾನೂನುಬಾಹಿರವಾಗಿದ್ದರೆ ಅವುಗಳ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದ ಅವರು ಪುಸ್ತಕದಲ್ಲಿನ ಆಕ್ಷೇಪಾರ್ಹ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಕಾನೂನು ಉಲ್ಲಂಘನೆಯಾಗಿರುವುದು ಸಾಬೀತಾದಲ್ಲಿ ಪುಸ್ತಕದ ಮಾರಾಟ ಮತ್ತು ವಿತರಣೆಯನ್ನು ತಡೆದು, ಮುಟ್ಟುಗೋಲು ಹಾಕಿಕೊಳ್ಳಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸು ಮಾಡಬೇಕು. ಕೃತಿಯ ರಚನೆ, ಪ್ರಕಟಣೆ ಹಾಗೂ ಪ್ರಸರಣದಲ್ಲಿ ಕಾನೂನುಬಾಹಿರ ಕೃತ್ಯ ಎಸಗಿರುವುದು ದೃಢಪಟ್ಟಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಅಶಾಂತಿ ಅಥವಾ ಸಂಘರ್ಷ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದರು.
ಪಂಚಮಸಾಲಿ ಸಮಾಜದ ಮುಖಂಡ ವಿರೇಶಗೌಡ ಬಾಗೇವಾಡಿ, ಪುರಸಭೆ ಮಾಜಿ ಸದಸ್ಯ ವಿಜಯಸಿಂಗ್ ಹಜೇರಿ, ಕರವೇ ಜಿಲ್ಲಾ ಸಂಘಟನಾ ಸಂಚಾಲಕ ಜೈಭೀಮ ಮುತ್ತಗಿ ಮಾತನಾಡಿ ವಿಶ್ವಗುರು ಬಸವಣ್ಣನವರನ್ನು ಅಪಮಾನಿಸಿದ ಲೇಖಕ ರವಿ ಹಂಜ್ ಅವರ ಪುಸ್ತಕವನ್ನು ಸಂಪೂರ್ಣವಾಗಿ ನಿಷೇಧಿಸಿ, ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಶ್ರೀ ಬಸವೇಶ್ವರ ವೃತ್ತದಲ್ಲಿ ಭಾರಿ ಪ್ರತಿಭಟನೆ ನಡೆಸಿ ಲೇಖಕ ರವಿ ಹಂಜ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಎಪಿಎಂಸಿ ಮುಂಭಾಗದ ರಸ್ತೆ ಮೂಲಕ ಬಸ್ ನಿಲ್ದಾಣ ಮಾರ್ಗವಾಗಿ ತಹಶೀಲ್ದಾರ್ ಕಾರ್ಯಾಲಯಕ್ಕೆ ತಲುಪಿ ಅಲ್ಲಿ ಸಭೆಯಾಗಿ ಮಾರ್ಪಟ್ಟಿತು.
ನಂತರ ಉಪ ತಹಶೀಲ್ದಾರ್ ಏ.ಆರ್. ಚವ್ಹಾಣ ಅವರಿಗೆ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.
ಪೊಲೀಸ್ ಠಾಣೆಗೆ ದೂರು:-
ಪ್ರತಿಭಟನಾ ಮೆರವಣಿಗೆಯ ನಂತರ ಪೊಲೀಸ್ ಠಾಣೆಗೆ ತೆರಳಿದ ಬಸವಾಭಿಮಾನಿಗಳು ಲೇಖಕ ರವಿ ಹಂಜ್ ಅವರನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಿವಂತೆ ಸ್ಥಳೀಯ ಠಾಣೆಯ ಪಿಎಸ್‌ಐ ಜ್ಯೋತಿ ಖೋತ್ ಅವರಿಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ದೂರು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಶ್ರೀ ಬಸವೇಶ್ವರ ಬಸವ ಸಮಿತಿ ಅಧ್ಯಕ್ಷ ಮಹಾಂತೇಶ ಮುರಾಳ, ಪಂಚಮಸಾಲಿ ಸಮಾಜದ ಅಧ್ಯಕ್ಷ ಡಾ.ವಿ.ಎಸ್.ಕಾರ್ಚಿ, ಕಸಾಪ ಅಧ್ಯಕ್ಷ ಆರ್. ಎಲ್. ಕೊಪ್ಪದ, ಕೆ.ಸಿ.ಸಜ್ಜನ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಕಾಶಿನಾಥ ಮುರಾಳ, ಎಂ.ಎಸ್.ಸರಶೆಟ್ಟಿ, ಐ.ಬಿ.ಬಿಳೇಭಾವಿ, ಪ್ರಕಾಶ ಹಜೇರಿ, ಪ್ರಭು ಬಿಳೇಭಾವಿ, ಈರಣ್ಣ ಕಲ್ಬುರ್ಗಿ, ಜಗದೀಶ ಬಿಳೇಭಾವಿ, ಅಪ್ಪುಗೌಡ ಪಾಟೀಲ, ಎಸ್.ಸಿ.ಪಾಟೀಲ, ಲಂಕೇಶ ಪಾಟೀಲ, ಸಿದ್ದನಗೌಡ ಹೊಟ್ಟಿ, ಬಸ್ಸು ಕಶೆಟ್ಟಿ, ರಾಘವೇಂದ್ರ ಮಾನೆ, ರವಿ ಚಂದುಕರ, ನವೀನ್ ಗೋನಾಳ, ಸಂಗಮೇಶ ಬಿಳೇಭಾವಿ, ಮಾನಸಿಂಗ್ ಕೊಕಟನೂರ, ಆರ್.ವಿ ಜಾಲವಾದಿ, ಬಾಬು ಹಜೇರಿ, ಚಿಂತಪ್ಪಗೌಡ ಯಾಳಗಿ, ಅಶೋಕ ಜಾಲವಾದಿ, ಮಂಜುನಾಥ ಶೆಟ್ಟಿ, ಎಂ.ಆರ್ ಕತ್ತಿ, ಜಿ.ಸಿ. ಜಮ್ಮಲದಿನ್ನಿ, ಅಶೋಕ ಜಾಲವಾದಿ, ಡಿ.ಕೆ. ಪಾಟೀಲ, ಮುತ್ತು ಕಶೆಟ್ಟಿ, ಅಶೋಕ ಬಳಗಾನೂರ, ನಾಗರಾಜ ಬಳಿಗಾರ, ನಾಗಪ್ಪ ಚಿನಗುಡಿ, ಜಗದೀಶ ಬಿಳೆಭಾವಿ, ಅಶೋಕ ಚಿನಗುಡಿ, ನಿಂಗಣ್ಣ ಕುಂಟೋಜಿ, ಪ್ರಕಾಶ್ ಪಾಟೀಲ, ದತ್ತಾತ್ರೇಯ ಉಬಾಳೆ, ಪವಾಡಪ್ಪ ಯಾಳವಾರ, ಎ.ಎಂ. ಸರೂರ, ಮೊದಲಾದವರು ಉಪಸ್ಥಿತರಿದ್ದರು.