ತಾಳಿಕೋಟೆ, ಪಟ್ಟಣದ ಸೌಂದರ್ಯೀಕರಣ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಅಳವಡಿಸಲಾಗಿರುವ ಬೀದಿ ದೀಪಗಳ ಪೈಕಿ ಹಲವು ದೀಪಗಳು ಕಳೆದ ಕೆಲವು ದಿನಗಳಿಂದ ಉರಿಯದೆ ಇರುವುದರಿಂದ ಪಟ್ಟಣದ ಪ್ರಮುಖ ರಸ್ತೆಗಳು ರಾತ್ರಿ ವೇಳೆ ಕತ್ತಲಿನಿಂದ ಕೂಡಿವೆ. ಇದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣದ ಬಸವೇಶ್ವರ ವೃತ್ತದಿಂದ ಶಿವಾಜಿ ಮಹಾರಾಜ ವೃತ್ತದವರೆಗೆ, ಅಲ್ಲಿಂದ ಜಾನಕ್ಕಿ ಹಳ್ಳದವರೆಗೆ ಹಾಗೂ ಅಂಜುಮನ್ ಕಾಲೇಜ್‌ವರೆಗಿನ ಪ್ರಮುಖ ರಸ್ತೆಗಳಲ್ಲಿರುವ ಹಲವು ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಇದೇ ವೇಳೆ ಪಟ್ಟಣದ ಕೆಲವು ಬಡಾವಣೆಗಳಲ್ಲಿಯೂ ಬೀದಿ ದೀಪಗಳು ಉರಿಯದೆ ಇರುವುದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.
ಪಟ್ಟಣದ ಸೌಂದರ್ಯೀಕರಣದ ಅಂಗವಾಗಿ ಅಳವಡಿಸಲಾಗಿರುವ ಬೀದಿ ದೀಪಗಳ ಕೆಲವು ಕಂಬಗಳಿಗೆ ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಕಂಬಗಳು ವಾಲಿವೆ. ಎಸ್.ಕೆ. ಡಿಗ್ರಿ ಕಾಲೇಜ್ ಮುಂಭಾಗದಲ್ಲಿದ್ದ ವಿದ್ಯುತ್ ಕಂಬವೊಂದು ನೆಲಕ್ಕೆ ಬಿದ್ದ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಿ ಬದಿಯಲ್ಲಿ ಇಡಲಾಗಿದೆ. ಆದರೆ, ಈ ಸ್ಥಳದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಅಗತ್ಯಕ್ಕೆ ಪುರಸಭೆ ಅಧಿಕಾರಿಗಳಾಗಲಿ ಬೀದಿ ದೀಪ ನಿರ್ವಹಣೆ ಗುತ್ತಿಗೆ ಹಿಡಿದ ಗುತ್ತಿಗೆದಾರರಾಗಲಿ ಮುಂದಾಗಿಲ್ಲಾವೆಂದು ಸಾರ್ವಜನಿಕರು ದೂರಿದ್ದಾರೆ.
ಹಳೆಯ ಕೇಬಲ್‌ಗಳಿಂದ ಸಮಸ್ಯೆ ಬೀದಿ ದೀಪಗಳು ಉರಿಯದಿರುವುದಕ್ಕೆ ಪ್ರಮುಖ ಕಾರಣ ವಿದ್ಯುತ್ ಪೂರೈಕೆ ಮಾಡುವ ಕೇಬಲ್‌ಗಳ ದೋಷವಾಗಿದೆ ಎನ್ನಲಾಗುತ್ತಿದೆ. ಹಲವು ವರ್ಷಗಳಿಂದ ಬಳಕೆಯಲ್ಲಿರುವ ಕೇಬಲ್‌ಗಳು ಹಳೆಯದಾಗಿದ್ದು, ಅಲ್ಲಲ್ಲಿ ಕಟ್ ಆಗಿರುವುದರಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಕೇವಲ ಬಲ್ಬ್‌ಗಳನ್ನು ಬದಲಾಯಿಸುವುದರಿಂದ ಸಮಸ್ಯೆ ಪರಿಹಾರವಾಗದೆ, ಕೇಬಲ್‌ಗಳನ್ನು ಪರಿಶೀಲಿಸಿ ಅಗತ್ಯವಿರುವ ಕಡೆಗಳಲ್ಲಿ ಮರುಜೋಡಣೆ ಅಥವಾ ಹೊಸ ಕೇಬಲ್ ಅಳವಡಿಕೆ ಮಾಡಬೇಕಾಗಿದೆ.
ಕೆಲವು ಕಡೆಗಳಲ್ಲಿ ಬಲ್ಬ್‌ಗಳು ಸುಟ್ಟು ಹೋಗಿರುವುದರಿಂದಲೂ ಬೀದಿ ದೀಪಗಳು ಉರಿಯುತ್ತಿಲ್ಲ. ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡಿ ಸುಟ್ಟುಹೋದ ಬಲ್ಬ್‌ಗಳನ್ನು ಬದಲಾಯಿಸುವುದರ ಜೊತೆಗೆ, ಹಾನಿಗೊಳಗಾದ ಕಂಬಗಳನ್ನು ಸರಿಪಡಿಸಿ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ಬೀದಿ ದೀಪಗಳ ನಿರ್ವಹಣೆಗೆ ಪುರಸಭೆ ಆದ್ಯತೆ ನೀಡಬೇಕಾಗಿದೆ. ಹಳೆಯ ಕೇಬಲ್‌ಗಳ ದುರಸ್ತಿ, ಹೊಸ ಕೇಬಲ್ ಅಳವಡಿಕೆ, ಸುಟ್ಟುಹೋದ ಬಲ್ಬ್‌ಗಳ ಬದಲಾವಣೆ ಹಾಗೂ ವಾಲಿರುವ ಕಂಬಗಳ ದುರಸ್ತಿ ಕಾರ್ಯಗಳನ್ನು ತ್ವರಿತವಾಗಿ ಕೈಗೊಂಡು ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ತಿಂಗಳಾಂತ್ಯದಿಂದ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳು ಹತ್ತುತ್ತಿಲ್ಲ. ಈ ಕುರಿತು ಪುರಸಭೆಯ ಗಮನಕ್ಕೆ ತಂದಿದ್ದರೂ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಇದರ ಜೊತೆಗೆ ಕೆಲವು ಬಡಾವಣೆಗಳಲ್ಲಿಯೂ ಬೀದಿ ದೀಪಗಳು ಉರಿಯುತ್ತಿಲ್ಲ. ಕೂಡಲೇ ಸಮಸ್ಯೆ ಪರಿಹರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು.