ಯರಗಟ್ಟಿ: ಧಾರ್ಮಿಕ ಆಚರಣೆಗಳಿಂದ ಮಾತ್ರ ಮನಸ್ಸಿನ ನೆಮ್ಮದಿ ಶಾಂತಿ ದೊರಕುತ್ತದೆ. ಹಣ ಐಶ್ವರ್ಯ, ಅಧಿಕಾರ ಯಾವುದರಿಂದಲೂ ನೆಮ್ಮದಿ ಸಿಗಲಾರದು ಎಂದು ಸ್ಥಳೀಯ ನಂದಿಮಠದ ಬಾಳಯ್ಯಜ್ಜ ಹೇಳಿದರು.
ಸಮೀಪದ ತಲ್ಲೂರ ಗ್ರಾಮದಲ್ಲಿ ಶ್ರೀ ಹನುಮಂತ ದೇವರ ಜಾತ್ರಾ ಮಹೋತ್ಸವದ ನಿಮಿತ್ಯ ಗುರುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಠ ಮಾನ್ಯಗಳಲ್ಲಿ ನಡೆಯುವ ದಾರ್ಮಿಕ ಕಾರ್ಯಕ್ರಮಗಳಲ್ಲಿ ಇಂದಿನ ಯುವ ಸಮೂಹ ಶ್ರದ್ಧೆಯಿಂದ ಭಾಗವಹಿಸಬೇಕು ಎಂದು ಹೇಳಿದರು.
ಪಿಕೆಪಿಎಸ್ ಮಾಜಿ ಅಧ್ಯಕ್ಷ ಶ್ರೀಮಂತ ಅನಿಲಕುಮಾರ ದೇಸಾಯಿ ಮಾತನಾಡಿ, ಪ್ರತಿಯೊಬ್ಬರೂ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮನೆ ಮನೆಗೆ ಬೇಟಿ ನೀಡುವ ಬಿಎಲ್‌ಒಗಳಿಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಇದಕ್ಕೂ ಮುಂಚೆ ಬೆಳಗ್ಗೆ ಹನುಮಂತ ದೇವರ ಅಭಿಷೇಕ, ಎಲೆ ಪೂಜೆ, ಶ್ರೀರಾಮ ಜಪ ಹಾಗೂ ಹನುಮಾನ ಚಾಲೀಸ್ ಪಠಣ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿದವು. ಗ್ರಾಮಸ್ಥರು ಓಕಳಿ ಹೊಂಡಕ್ಕೆ ಪೂಜೆ ಸಲ್ಲಿಸಿದರು. ಸಂಜೆ ಯುವಕರು ಪರಸ್ಪರ ನೀರು ಎರಚಿ ಸಂಭ್ರಮಿಸಿದರು,
ಗ್ರಾಮದ ಪ್ರಮುಖ ಬೀದಿಗಳು ತಳಿರು ತೋರಣ ಹಾಗೂ ವಿದ್ಯುತ ದೀಪಗಳಿಂದ ಅಲಂಕೃತಗೊಂಡಿದ್ದವು. ವಿವಿಧ ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ತೆರಳಿ ಭಕ್ತರು ನೈವೇದ್ಯ ಅರ್ಪಿಸಿದರು. ಮಾರುತಿ ದೇವರ ಬುತ್ತಿ ಪೂಜೆಯೊಂದಿಗೆ ಅಲಂಕಾರ ಮಾಡಲಾಯಿತು.
ಮುಖಂಡ ಬಸವರಾಜ ಪೂಜೇರ, ನೀಲಕಂಠ ಶಿವಪೂಜಿ, ಬಸವರಾಜ ಈಟಿ, ವಿಠ್ಠಲ ಕಲ್ಲನ್ನವರ, ಪರಶುರಾಮ ಜಾಧವ, ಶಿವಪ್ಪ ನಡುವಿನಮನಿ, ಶಿವಾಜಿ ಬೋಯಿಟೆ, ಬಸವಣ್ಣೆಪ್ಪ ಕಲಬಸಪ್ಪನವರ, ಪಕ್ಕೀರಪ್ಪ ಉಪ್ಪಾರ, ಬಸವರಾಜ ಕಲ್ಲನ್ನವರ, ಹನಮಂತ ಮನ್ನಿಕೇರಿ, ಬಸವರಾಜ ಕಟ್ಟಿಮನಿ, ಸಂಗಪ್ಪ ಕಾಜಗಾರ, ಲಕ್ಷಣ ಈರಗಾರ, ಪಕ್ಕೀರಪ್ಪ ಭಜಂತ್ರಿ, ನಿಂಗಪ್ಪ ದೊಡವಾಡ, ಶಿವಯೋಗಿ ಬಡಿಗೇರ, ಗುಡುಸಾಬ ಸಾಬರ ಮತ್ತಿತರಿದ್ದರು.
