ಯರಗಟ್ಟಿ : ಭಾವೈಕ್ಯತೆ, ಶ್ರಮದಾನ, ನಾಯಕತ್ವ ಗುಣ, ಒಗ್ಗಟ್ಟು ಬೆಳೆಸುವಲ್ಲಿ ವ್ಯಕ್ತಿತ್ವ ವಿಕಸನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಮಹತ್ವದ್ದಾಗಿದೆ. ಒಬ್ಬರು ಸೇವೆ ಮಾಡುವುದಕ್ಕಿಂತ ಒಟ್ಟಾಗಿ ಸೇವೆ ಮಾಡಿದರೆ ಅದರ ಫಲಶೃತಿ ವಿಭಿನ್ನವಾಗಿರುತ್ತದೆ, ಸತ್ಪಾತ್ರರಿಗೆ ಮುಟ್ಟುತ್ತದೆ. ಸ್ವಯಂಸೇವಕರು ಸ್ವಯಂಪ್ರೇರಣೆಯಿಂದ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಶಿಬಿರದಲ್ಲಿ ಪಾಲ್ಗೊಂಡು ಶಿಸ್ತನ್ನು ಕಲಿಯುವುದು, ಸಮಾಜಮುಖಿ ಚಿಂತನೆ ಮಾಡುವುದು ನಿಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ. ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಲು ಎನ್.ಎಸ್.ಎಸ್.ಶಿಬಿರಗಳು ಸಹಾಯವಾಗುತ್ತವೆ. ಸ್ವಯಂ ಸೇವಕರು ಪವಿತ್ರ ಮನಸ್ಸಿನಿಂದ, ಬಲಶಾಲಿಯಾಗಿ ಸೇವೆ ಸಲ್ಲಿಸುವ ಗುಣ ಬೆಳೆಸಿಕೊಳ್ಳಿ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಆರ್.ಎಚ್.ಪಾಟೀಲ ಹೇಳಿದರು.
ಸಮೀಪದ ಮುನವಳ್ಳಿ ಪಟ್ಟಣದ ಜೆ.ಎಸ್.ಪಿ. ಸಂಘದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ರಾಷ್ಟ್ರೀಯ ಸೇವಾ ಯೋಜನೆಯ ಒಂದು ದಿನದ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಸವದತ್ತಿ ರಾಮದುರ್ಗ ತಾಲೂಕಿನ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಶ್ರೀಶೈಲ ಗೋಪಶೆಟ್ಟಿ ಮಾತನಾಡಿ ಒಂದು ವಾರ ಎನ್.ಎಸ್.ಎಸ್. ಶಿಬಿರ ಮಾಡುತ್ತಾರೆ ಆದರೆ ಪ್ರಥಮ ಬಾರಿಗೆ ಅಜ್ಜಪ್ಪ ಗಡಮಿ ಕಾಲೇಜಿನ ಎನ್.ಎಸ್.ಎಸ್. ಘಟಕ ಒಂದು ದಿನದ ವಿಶೇಷ ಶಿಬಿರ ಆಯೋಜನೆ ಮಾಡಿ ಸ್ವಯಂಸೇವಕರಲ್ಲಿ ಸೇವಾಭಾವನೆ ವೃದ್ಧಿಗೊಳಿಸಲು ಸಹಕಾರಿಯಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಸ್ವಯಂಸೇವಕರ ಅನುಭವ ವಿಶಿಷ್ಟವಾದುದು ಹಾಗೂ ವಿಶೇಷವಾದ್ದಾಗಿರುತ್ತದೆ ಮುಂದಿನ ಜೀವನಕ್ಕೆ ಮುನ್ನುಡಿ ಬರೆಯುತ್ತದೆ ಎಂದರು. ಪ್ರಗು ವೀರಣ್ಣ ಕೊಳಕಿ ಎನ್.ಎಸ್.ಎಸ್. ಧ್ವಜಾರೋಹಣ ನೆರವೇರಿಸಿದರು.
ಅಧ್ಯಕ್ಷತೆ ವಹಿಸಿದ ಪ್ರೊ. ಶಂಕರ ಚುಳಕಿ ಎನ್.ಎಸ್.ಎಸ್. ಸಂಸ್ಥಾಪಕರು, ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯೋದ್ದೇಶಗಳು, ಕಾರ್ಯವೈಖರಿ ಕುರಿತು ಮಾತನಾಡಿದರು. ಪ್ರಾ.ಡಾ. ಎಂ.ಎಸ್.ಬಾಗೇವಾಡಿ, ಉಪನ್ಯಾಸಕ ಉದಯ ಕಂಕಣವಾಡಿ, ಎಸ್.ಎಲ್. ತುಪ್ಪಳಿ, ದೀಪಾ ಶಿರಸಂಗಿ, ಪ್ರವೀಣ ಸಕ್ರೆವ್ವಗೋಳ, ಸೇರಿದಂತೆ ಸ್ವಯಂ ಸೇವಕ, ಸೇವಕಿಯರು ಇದ್ದರು. ಸಾವಯವ ಕೃಷಿಕ ರಾಜೀವ ಹೆಬಸೂರ ಪಠ್ಯೇತರ ಚಟುವಟಿಕೆ ಮಹತ್ವ ಹಾಗೂ ಕೌಶಲ ಅಭಿವೃದ್ಧಿ ಕುರಿತು ಮಾತನಾಡಿದರು. ಕಾಲೇಜು ಆವರಣ ಸ್ವಚ್ಛತೆ ಹಾಗೂ ಕಂಪೌಂಡ ನಿರ್ಮಾಣ ಮಾಡಲು ಶ್ರಮದಾನ ಮಾಡಿದರು.