ಮುದ್ದೇಬಿಹಾಳ: ಆ.28ರಂದು ನೂಲಿಯ ಚಂದಯ್ಯನವರ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತೋತ್ಸವ ಆಚರಣೆ ಹಿನ್ನೆಲೆಯಲ್ಲಿ ಸೋಮವಾರ ತಹಸೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಪಟ್ಟಣದಲ್ಲಿರುವ ನೂಲಿಯ ಚಂದಯ್ಯನವರ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ವೃತ್ತದಲ್ಲಿ ಸಮಾಜದ ವತಿಯಿಂದ ನಡೆಯುವ ಜಯಂತಿ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಭಾಗವಹಿಸಬೇಕು. ಬಳಿಕ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಜಯಂತಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜಯಂತಿ ದಿನದಂದು ಪಟ್ಟಣದ ಸ್ವಚ್ಛತೆಗೆ ಪುರಸಭೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಲಾಯಿತು.
ಕಂದಾಯ ಇಲಾಖೆಯ ವಿರುದ್ಧ ಆಕ್ರೋಶ : ತಾಲೂಕು ಆಡಳಿತದ ವತಿಯಿಂದ ನೂಲಿಯ ಚಂದಯ್ಯನವರ ಜಯಂತಿಗೆ ಕಳೆದ ನಾಲ್ಕು ವರ್ಷಗಳಿಂದ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸುತ್ತಿಲ್ಲ. ಈ ಕುರಿತು ಕಂದಾಯ ಇಲಾಖೆಯ ಬಿ.ಎಸ್. ಮುದ್ದೇಬಿಹಾಳ ಅವರನ್ನು ಪ್ರಶ್ನಿಸಿದಾಗ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ ಎಂದು ಹೇಳುತ್ತಾರೆ. ಸಣ್ಣ ಸಮುದಾಯದ ಗುರುಗಳ ಜಯಂತಿಗೆ ಮಾತ್ರ ಸರ್ಕಾರ ಅನುದಾನ ನೀಡುತ್ತಿಲ್ಲವೇ ಎಂದು ಪ್ರಶ್ನಿಸಿದ ತಾಲೂಕು ಭಜಂತ್ರಿ ಸಮಾಜದ ಅಧ್ಯಕ್ಷ ನಾಗಪ್ಪ ಭಜಂತ್ರಿ, ಕಂದಾಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಾ ಪುರಸ್ಕಾರಕ್ಕೆ ಸಲಹೆ : ನೂಲಿಯ ಚಂದಯ್ಯನವರ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ಸಂದರ್ಭದಲ್ಲಿ ಎರಡೂ ಸಮಾಜಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಾಲೂಕು ಆಡಳಿತದ ವತಿಯಿಂದ ಪ್ರತಿಭಾ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಬೇಕು ಎಂದು ಸಭೆಯಲ್ಲಿ ಸಲಹೆ ನೀಡಲಾಯಿತು.
ಸಭೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಮಾಜದ ತಾಲೂಕು ಅಧ್ಯಕ್ಷ ಎ. ಗಣೇಶ, ಟಿ. ವಿಜಯಭಾಸ್ಕರ, ರವಿ ಭಜಂತ್ರಿ, ತಾಲೂಕು ಬಿಸಿಯೂಟದ ಅಧಿಕಾರಿ ಎಂ.ಎಂ. ಬೆಳಗಲ್ಲ, ಪುರಸಭೆಯ ಮಹಾಂತೇಶ ಕಟ್ಟಿಮನಿ, ತೋಟಗಾರಿಕೆ ಇಲಾಖೆಯ ವಿನೋದ ಬಿರಾದಾರ, ಸಮಾಜ ಕಲ್ಯಾಣ ಇಲಾಖೆಯ ಎಸ್.ಬಿ. ಕಟ್ಟಿಮನಿ, ಕಾರ್ಮಿಕ ಇಲಾಖೆಯ ಎಲ್.ಡಿ. ಮುಲ್ಲಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.