ದಾವಣಗೆರೆ:
ಹರಿಹರ ಪಂಚಮಸಾಲಿ ಪೀಠದ ವಿವಾದ ಮುಂದುವರೆದಿದ್ದು, ಸ್ವಾಮೀಜಿ ಹಾಗೂ ಟ್ರಸ್ಟಿಗಳ ನಡುವೆ ಮುನಿಸು ಮುಗಿಯುವಂತೆ ಕಾಣುತ್ತಿಲ್ಲ. ವಚನಾನಂದ ಸ್ವಾಮೀಜಿಗೆ, ಮಠದ ಟ್ರಸ್ಟಿಗಳಿಗೆ ಹಾಗೂ ಅವರ ಬೆಂಬಲಿಗರಿಗೆ ಜಿಲ್ಲಾಡಳಿತದಿಂದ ಹಾಗೂ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗಿದ್ದರೂ ಇಂದು ಸಭೆ ನಡೆಸಲು ಮುಂದಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎನ್ಎಸ್ 163 ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮಠದಲ್ಲಿ ವಿವಾದಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಪಂಚಮಸಾಲಿ ಪೀಠದಲ್ಲಿ ಯಾವುದೇ ಸಭೆ, ಸಮಾರಂಭ ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಜಿ ಎಂ ಗಂಗಾಧರಸ್ವಾಮಿ ಮೇ 1 ರಿಂದ 30ರ ವರೆಗೆ ಪಂಚಮಸಾಲಿ ಮಠದ ಆವರಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಕಳೆದ ಮಾರ್ಚ್ 10 ರಿಂದ ಮಠದಲ್ಲಿ ಎರಡು ಕಡೆ ಬೆಂಬಲಿಗರಿಂದ ಸಭೆ, ಸಮಾರಂಭ, ಮಾಧ್ಯಮಗೋಷ್ಟಿಗಳು ನಡೆಯುತ್ತಿವೆ. ಇವು ವಿಕೋಪಕ್ಕೆ ತಿರುಗಿದ್ದು, ಗಲಾಟೆಗಳು, ಪ್ರಚೋದನಕಾರಿ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಆದ್ದರಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ, ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ.
ಪೊಲೀಸ್ ಇಲಾಖೆ ಪದೇ ಪದೇ ಭದ್ರತೆ ನೀಡಲು ಆಗುವುದಿಲ್ಲ. ಆದ್ದರಿಂದ ಪಂಚಮಸಾಲಿ ಪೀಠದಲ್ಲಿ ಯಾವುದೇ ಸಭೆ, ಸಮಾರಂಭ, ಮಾಧ್ಯಮಗೋಷ್ಟಿ ನಡೆಸುವಂತಿಲ್ಲ ಎಂದು ನೋಟಿಸ್ ನೀಡಲಾಗಿದೆ. ಹರಿಹರ ಗ್ರಾಮಾಂತರ ಠಾಣೆಯಿಂದಲೂ ಟ್ರಸ್ಟಿಗಳಿಗೆ ಹಾಗೂ ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಲಾಗಿದೆ.
ವಚನಾನಂದ ಸ್ವಾಮೀಜಿ ಹಾಗೂ ಬೆಂಬಲಿಗರು ಇಂದು ಟ್ರಸ್ಟಿಗಳ ವಿರುದ್ಧ ಲೆಕ್ಕಕೊಡಿ ಅಭಿಯಾನ ಹಮ್ಮಿಕೊಂಡಿದ್ದರು. ಕಳೆದ ಎಪ್ರಿಲ್ 27 ರಂದು ಟ್ರಸ್ಟಿಗಳು ಸುಳ್ಳು ಲೆಕ್ಕ ನೀಡಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಪಾರದರ್ಶಕ ಲೆಕ್ಕವನ್ನು ಮಂಡನೆ ಮಾಡಬೇಕು ಎಂದು ಸ್ವಾಮೀಜಿ ಬೆಂಬಲಿಗರು ಮನವಿ ಮಾಡಿದ್ರು. ಹಳ್ಳಿ ಹಳ್ಳಿಗೂ ತೆರಳಿ ಭಕ್ತರು ನೀಡಿದ ಕಾಣಿಕೆ ಬಗ್ಗೆ ಪಟ್ಟಿ ಮಾಡಲು ಸ್ವಾಮೀಜಿ ಬೆಂಬಲಿಗರು ಮುಂದಾಗಿದ್ದರು. ಇನ್ನು ಇಂದು ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಈ ಹಿನ್ನೆಲೆ ಯಾವುದೇ ಸಭೆ ನಡೆಸದಂತೆ ಮುನ್ನೆಚ್ಚರಿಕೆಯಿಂದ ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಜಾರಿ ಮಾಡಿದೆ.
ವಚನಾನಂದ ಸ್ವಾಮೀಜಿ ಅವರನ್ನು ಟ್ರಸ್ಟ್ ಉಚ್ಚಾಟನೆ ಮಾಡಿದಾಗಿನಿಂದ ಮಠದಲ್ಲಿ ಒಂದಲ್ಲ ಒಂದು ಘಟನೆಗಳು ನಡೆಯುತ್ತಲೇ ಇವೆ. ಮೊದಲಿಗೆ ವಚನಾನಂದ ಸ್ವಾಮೀಜಿ ಹಾಗೂ ಬೆಂಬಲಿಗರು, ಆಡಳಿತಾಧಿಕಾರಿ ಡಾ. ರಾಜಕುಮಾರ, ಮಾಜಿ ಶಾಸಕರುಗಳಾದ ಶಿವಶಂಕರ್, ಅರುಣ್ ಕುಮಾರ್ ಪೂಜಾರ್ ಲೆಕ್ಕ ಕೊಡಿ ಚಳವಳಿ ಮಾಡಿದ್ದರು. ಟ್ರಸ್ಟಿಗಳು ಹಣದಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದ ಪಟ್ಟು ಹಿಡಿದ ಟ್ರಸ್ಟಿಗಳು ಲೆಕ್ಕ ಕೊಡುವ ಕಾರ್ಯಕ್ರಮ ಮಾಡಿ ಪ್ರಧಾನ ಧರ್ಮದರ್ಶಿ ಬಿ. ಸಿ. ಉಮಾಪತಿಯವರು ಒಂದೊಂದು ರೂಪಾಯಿ ಲೆಕ್ಕ ಕೊಟ್ಟರು. ಅದ್ರು ಇದು ಸುಳ್ಳು ಲೆಕ್ಕ ಎಂದು ಸ್ವಾಮೀಜಿ ಹಾಗೂ ಅವರ ಬೆಂಬಲಿಗರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.