ರಾಮದುರ್ಗ,ಜು,೨೨: ಇಂದಿನ ಕಾನೂನು ಸುವ್ಯವಸ್ಥೆ ನಮಗೆ ತಕ್ಕಂತೆ ಇರುವುದಿಲ್ಲ. ಹಲವಾರು ಸನ್ನಿವೇಷಗಳಲ್ಲಿ ನಡೆಯುವ ಘಟನೆಗಳ ವರದಿ ಮಾಡುವಾಗ ಪತ್ರಕರ್ತರು ಬಹಳ ಜಾಣತನದಿಂದ ಕಾರ್ಯ ನಿಭಾಯಿಸಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಹೇಳಿದರು.
ಸ್ಥಳೀಯ ರಾಜ್ಯ ಸರಕಾರಿ ನೌಕರರ ಸಭಾ ಭವನದಲ್ಲಿ ಹಮ್ಮಿಕೊಂಡ ನೂತನ ಮಾಸಪತ್ರಿಕೆ ರತ್ನಗಂಬಳಿ ಬಿಡುಗಡೆ ಸಮಾರಂಭ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ ಸಂಗ್ರಾಮದಲ್ಲಿ ಪತ್ರಿಕೆಗಳ ಕಾರ್ಯ ಗುರುತರವಾದುದು ಎಂದು ಪತ್ರಿಕೆಗಳ ಕಾರ್ಯವನ್ನು ಸ್ಮರಿಸಿದರು.
ಸಾನಿಧ್ಯ ವಹಿಸಿದ್ದ ಲಖನಾಯ್ಕನಕೊಪ್ಪದ ಪೂರ್ಣನಂದ ಮಠದ ಶ್ರೀ ಕೃಷ್ಣಾನಂದ ಸ್ವಾಮೀಜಿ ಮಾತನಾಡಿ, ಪತ್ರಿಕೆ ಓದುವುದರಿಂದ ಮಾನಸಿಕ ನೆಮ್ಮದಿ ವೃದ್ಧಿಯಾಗುತ್ತದೆ. ಪುಸ್ತಕ ಓದುವ ಸಂಸ್ಕೃತಿ ಬೆಳೆದಾಗ ನಾಡಿನ ಮನೆ-ಮನಗಳ ವಿಕೃತಿ ಅಳಿದು ಜನಮಾನಸಕ್ಕೆ ನೆಮ್ಮದಿ ದೊರೆಯುವುದು. ಇಂದಿನ ಪತ್ರಿಕೋದ್ಯಮ ಕಷ್ಟದಾಯಕವಾಗಿದೆ. ಆದರೂ ಸಹ ಇಂದು ಪತ್ರಿಕೆಗಳಿಂದ ಎಲ್ಲಾ ಕಡೆಗೂ ಜ್ಞಾನದ ಬೆಳಕು ಮೂಡಬೇಕಾಗಿದೆ. ಆ ಕಾರ್ಯವನ್ನು ಸಂಪಾದಕರು, ವರದಿಗಾರರು ಮಾಡಬೇಕು ಎಂದರು.
ಬಿಜೆಪಿ ಮುಖಂಡ ಡಾ. ಬಿ.ಎನ್. ಮಾದನ್ನವರ ಮಾತನಾಡಿ, ನಾಲ್ಕನೇ ಅಂಗ ಎಂದು ಖ್ಯಾತನಾಮದಲ್ಲಿ ಗುರುತಿಸಿಕೊಂಡ ಪತ್ರಿಕೆಗಳ ಕಾರ್ಯ ಅಳತೆ ಮೀರಿದ ವ್ಯಾಪ್ತಿಯಲ್ಲಿದೆ. ಕಷ್ಟದಾಯಕ ಕಾರ್ಯವಾದರೂ ಇದು ಬಹಳ ಗೌರವಾನ್ವಿತ ಕಾರ್ಯ ಆಗಿದೆ. ಇದನ್ನು ಸಾರ್ಥಕಪಡಿಸಿಕೊಂಡು ಪತ್ರಕರ್ತರು ಉತ್ತಮ ಸಾಧನೆ ಮಾಡುತ್ತ ದೇಶ-ಸಮಾಜದ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿ ಎಂದು ಹೇಳಿದರು.ವಿಜಯ ಸೇನಾ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ವಿಜಯ ನಾಯ್ಕ ಮಾತನಾಡಿ, ಪತ್ರಿಕಾಕರ್ತರು ರೋಲ್-ಕಾಲ್ ಪದ್ಧತಿಯಲ್ಲಿ ಮುನ್ನುಗ್ಗದೆ ರೋಲ್ ಮಾಡೆಲ್ ಪದ್ಧತಿಯಲ್ಲಿ ಕಾರ್ಯ ಮಾಡುತ್ತ ಸಾಗಿದರೆ ಸಮಾಜದಲ್ಲಿ ಉತ್ತಮ ಮೌಲ್ಯಗಳು ವೃದ್ಧಿ ಆಗುತ್ತವೆ ಎಂದರು.
ಸುಧಿರ್ಘ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಈಗ ವಿಶ್ರಾಂತರಾದ ಮಲ್ಲಿಕಾರ್ಜುನ ಭಾವಿಕಟ್ಟ್ಟಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಸಲಾಯಿತು. ಕುಳಗೇರಿ ಪಿ.ಕೆ.ಪಿ.ಎಸ್ ಮುಖಂಡ ಶ್ರೀಕಾಂತ್ ಅಡಪಟ್ಟಿ, ಮೌಲ ಸಂಪದ ಪತ್ರಿಕೆ ಸಂಪಾದಕ ಸೋಮಶೇಖರ್ ಸೊಗಲದ ಪತ್ರಿಕಾ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು. ರತ್ನಗಂಬಳಿ ಪತ್ರಿಕೆಯ ಸಂಪಾದಕ ಮಲ್ಲಪ್ಪ ಕಂಬಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಲ್ಲನಗೌಡ ಪಾಟೀಲ, ಕುಳಗೇರಿ ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜ ಕಟ್ಟೆಕರ, ಬಸವರಾಜ ಒಕ್ಕಲಗೇರಿ ಉಪಸ್ಥಿತರಿದ್ದರು. ಮಹೇಶ ಸುಳ್ಳದ ನಿರೂಪಿಸಿ, ವಂದಿಸಿದರು.