LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

*ಶಾಸಕ ನಿಖಿಲ್ ಕತ್ತಿ ಹೇಳಿಕೆಗೆ ಖಡಕ್ ಕೌಂಟರ್ ಕೊಟ್ಟ ಸಂಸದೆ ಪ್ರಿಯಂಕಾ ಜಾರಕಿಹೊಳಿ*

*ಬೆಳಗಾವಿ:* ಹುಕ್ಕೇರಿ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ನಿಖಿಲ್ ಕತ್ತಿ ಅವರು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರು ಕ್ಷೇತ್ರಕ್ಕೆ ಕೇಂದ್ರದಿಂದ ಯಾವುದೇ ವಿಶೇಷ ಅನುದಾನ ತಂದಿಲ್ಲ ಎಂದು ಮಾಡಿರುವ ಆರೋಪಕ್ಕೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
2023ರಲ್ಲಿ ರಾಜ್ಯದಲ್ಲಿ ತೀವ್ರ ಬರಗಾಲ ಎದುರಾದ ಸಂದರ್ಭದಲ್ಲಿ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (NDRF) ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾಗಿದ್ದ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರಲಿಲ್ಲ. ಈ ಅನುದಾನಕ್ಕಾಗಿ ರಾಜ್ಯ ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ, ಕೇಂದ್ರದಲ್ಲಿ ತಮ್ಮದೇ ಪಕ್ಷದ ಸರ್ಕಾರವಿರುವುದನ್ನು ಹುಕ್ಕೇರಿ ಶಾಸಕರು ಗಮನದಲ್ಲಿಟ್ಟುಕೊಂಡು ಮಾತನಾಡಬೇಕು ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಕೇಂದ್ರದ ಪಂಚಾಯತ್ ರಾಜ್ ಇಲಾಖೆಯಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾಗಿರುವ 2,000 ಕೋಟಿಗೂ ಅಧಿಕ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಈ ಅನುದಾನಕ್ಕಾಗಿ ರಾಜ್ಯ ಸರ್ಕಾರ ಮತ್ತೊಮ್ಮೆ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.
ಅದೇ ರೀತಿ, 2023ರ ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಘೋಷಿಸಲಾಗಿತ್ತು. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಈ ಯೋಜನೆಗೆ ಇದುವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸಂಸದೆ ಆರೋಪಿಸಿದ್ದಾರೆ.
*ಶಾಸಕ ಕತ್ತಿ ರಾಜ್ಯಕ್ಕೆ ಆರ್ಥಿಕ ಅನುದಾನ ಬಿಡುಗಡೆ ಮಾಡಿಸಲಿ:* ಇದಲ್ಲದೆ, 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬಾಕಿ ಇರುವ ಸುಮಾರು 5,000 ಕೋಟಿಯ ಅನುದಾನವೂ ಇನ್ನೂ ಬಿಡುಗಡೆಯಾಗಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ತೆರಿಗೆ ಪಾಲಿನ ಮೇಲೆ ಕೇಂದ್ರ ಸರ್ಕಾರ ಬಿಗಿ ಹಿಡಿತ ಹೊಂದಿದ್ದು, ಕರ್ನಾಟಕಕ್ಕೆ ನಿಯಮಾನುಸಾರ ಹಂಚಿಕೆಯಾಗಬೇಕಾದ ಅನುದಾನವನ್ನೇ ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಶೇಷ ಅನುದಾನ ತರುವ ವಿಚಾರ ಇನ್ನೂ ದೂರದ ಮಾತಾಗಿದೆ ಎಂದು ಹೇಳಿದ ಅವರು, ಹುಕ್ಕೇರಿ ಶಾಸಕರು ಮೊದಲು ತಮ್ಮದೇ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರವನ್ನು ರಾಜ್ಯಕ್ಕೆ ನಿಯಮಾನುಸಾರವಾಗಿ ಹಂಚಿಕೆಯಾಗಬೇಕಾದ ಆರ್ಥಿಕ ಅನುದಾನವನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಲಿ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಸಲಹೆ ನೀಡಿದ್ದಾರೆ.
*ಕ್ಷೇತ್ರದ ಅಭಿವೃದ್ಧಿಗೆ ಸಂಸದರ ನಿರಂತರ ಪ್ರಯತ್ನ:* ಚಿಕ್ಕೋಡಿ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಲಭ್ಯವಿರುವ ಅನುದಾನದ ಮೂಲಗಳಿಂದ ಹಣವನ್ನು ತರಲು ನಿರಂತರವಾಗಿ ಶ್ರಮಿಸಲಾಗುತ್ತಿದೆ.  ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಹತ್ತಾರು ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್‌ಗಳನ್ನು ವಿತರಿಸಲಾಗಿದೆ. ತಿಂಗಳಿಗೆ ನೂರಾರು ಹೆರಿಗೆಗಳು ನಡೆಯುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಸೋಂಕು ಹರಡುವುದನ್ನು ತಡೆದು ತಾಯಿ ಹಾಗೂ ಶಿಶುಗಳ ಆರೋಗ್ಯ ಕಾಪಾಡುವ ಉದ್ದೇಶದಿಂದ ಆಸ್ಪತ್ರೆಗಳಿಗೆ ಹೆಚ್ಚಿನ ಸಾಮರ್ಥ್ಯದ ಲಾಂಡ್ರಿ ಯಂತ್ರಗಳನ್ನು ಸಂಸದರ ಅನುದಾನದಿಂದ ಒದಗಿಸಲಾಗಿದೆ. ಅದೇ ರೀತಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ವಿವಿಧ ಆಸ್ಪತ್ರೆಗಳಿಗೆ ಸ್ಕ್ರಬ್ಬರ್ ಡ್ರೈಯರ್ ಯಂತ್ರಗಳನ್ನು ಒದಗಿಸಲಾಗಿದೆ. ಅಂಗವಿಕಲ ನಾಗರಿಕರಿಗೆ ಶ್ರವಣ ಸಾಧನಗಳು, ಗಾಲಿ ಕುರ್ಚಿಗಳು, ತ್ರಿಚಕ್ರ ಸೈಕಲ್‌ಗಳು, ದ್ವಿಚಕ್ರ ವಾಹನಗಳು ಸೇರಿದಂತೆ ಅಪಘಾತಗಳಿಂದ ಬೆನ್ನುಹುರಿಗೆ ಗಾಯವಾಗಿರುವವರಿಗೆ ವಾಟರ್ ಬೆಡ್‌ಗಳನ್ನು ಸಂಸದರ ಅನುದಾನದಿಂದ ನೀಡಲಾಗಿದೆ. ನಿಡಸೋಸಿ ಗೇಟ್‌ನಲ್ಲಿರುವ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರ ಆರೈಕೆಗಾಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ ಹಾಗೂ ಆಪರೇಷನ್ ಥಿಯೇಟರ್‌ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾದ ಸಂದರ್ಭದಲ್ಲಿ ವೈದ್ಯರು ಮತ್ತು ರೋಗಿಗಳಿಗೆ ಅನುಕೂಲವಾಗುವಂತೆ ಜನರೇಟರ್ ಅನ್ನು ಸಂಸದರ ಅನುದಾನದ ಮೂಲಕ ಒದಗಿಸಲಾಗುತ್ತಿದೆ. ಚಿಕ್ಕೋಡಿ ತಾಲೂಕು ಆಸ್ಪತ್ರೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಎಕ್ಸ್‌ರೇ ಯಂತ್ರ ಹಾಗೂ ಕಣ್ಣಿನ ಪರೀಕ್ಷಾ ಯಂತ್ರಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ತಿಳಿಸಿದ್ದಾರೆ.
*ಬಡ ರೋಗಿಗಳ ಚಿಕಿತ್ಸೆಗೆ ವಿಶೇಷ ಆದ್ಯತೆ:* ಬಡ ರೋಗಿಗಳ ಚಿಕಿತ್ಸೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ 50ಕ್ಕೂ ಅಧಿಕ ಬಡ ರೋಗಿಗಳ ಚಿಕಿತ್ಸೆಗಾಗಿ ಸಂಸದರ ಕಚೇರಿಯಲ್ಲಿಯೇ ರೋಗಿಗಳ ಪರವಾಗಿ PM-NRF ಅರ್ಜಿಗಳನ್ನು ಭರ್ತಿ ಮಾಡಿಸಿ, ಪ್ರತಿ ರೋಗಿಗೆ 3 ಲಕ್ಷದವರೆಗೆ ಚಿಕಿತ್ಸಾ ನೆರವು ದೊರಕುವಂತೆ ಮಾಡಲು ವಿಶೇಷ ಪರಿಶ್ರಮ ವಹಿಸಲಾಗಿದೆ. ಇದಲ್ಲದೆ, ಸಂಸದರ ವಿಶೇಷ ಪ್ರಯತ್ನದಿಂದ ಕೇಂದ್ರ ಸರ್ಕಾರದ ಸಂಸ್ಥೆಯಾದ ALIMCO ಮೂಲಕ ಚಿಕ್ಕೋಡಿ ಲೋಕಸಭಾ ಕ್ಷೇತ್ರದ 1,000ಕ್ಕೂ ಅಧಿಕ ಅಂಗವಿಕಲ ನಾಗರಿಕರಿಗೆ ಅಗತ್ಯ ಸಾಧನ–ಸಲಕರಣೆಗಳನ್ನು ಶೀಘ್ರದಲ್ಲೇ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಸದರು ಯಾವುದೇ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ವಾಸ್ತವಾಂಶಗಳಿಗೆ ವಿರುದ್ಧವಾಗಿದೆ. ಕ್ಷೇತ್ರದ ಜನರ ಅಗತ್ಯಗಳಿಗೆ ಸ್ಪಂದಿಸಿ, ಲಭ್ಯವಿರುವ ಪ್ರತಿಯೊಂದು ಅನುದಾನದ ಮೂಲದಿಂದಲೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ ಆಸೆ ತೋರಿಸಿ ಭೂಮಿ ಕಬಳಿಕೆ ಯತ್ನ: ಮಡುಸಾಹುಕಾರ ಆರೋಪ*ಶಾಸಕ ನಿಖಿಲ್ ಕತ್ತಿ ಹೇಳಿಕೆಗೆ ಖಡಕ್ ಕೌಂಟರ್ ಕೊಟ್ಟ ಸಂಸದೆ ಪ್ರಿಯಂಕಾ ಜಾರಕಿಹೊಳಿ*ಬೆಳಗಾವಿ ಗ್ರಾಮೀಣ ಕ್ಷೇತ್ರದ 366 ದೇವಸ್ಥಾನಗಳಿಗೆ 3 ಕಂತಿನ ಹಣ ವಿತರಿಸಿದ ಹೆಬ್ಬಾಳಕರ.  ಶಾಸಕ ಅಪ್ಪಾಜಿ ನಾಡಗೌಡರ ಮನವಿಗೆ ಸರ್ಕಾರ ಸ್ಪಂದನೆ: ಇಂದಿನಿಂದ ಕೆರೆಗಳಿಗೆ ನೀರುವನ್ಯಜೀವಿ ಬೇಟೆ ಶಿಕ್ಷಾರ್ಹ ಅಪರಾಧ: ಇಂಡಿ ಅರಣ್ಯ ಇಲಾಖೆಯಿಂದ ಗ್ರಾಮಸ್ಥರಿಗೆ ಜಾಗೃತಿ"ನಾನು ಶಾಸಕನಾಗಿ ಬಂದಿಲ್ಲ, ಮಠದ ಭಕ್ತನಾಗಿ ಬಂದಿದ್ದೇನೆ" – ಯಶವಂತರಾಯಗೌಡ ಪಾಟೀಲಇಂಡಿಯಲ್ಲಿ ಶಿರಸಂಗಿ ಲಿಂಗರಾಜರ ವೃತ್ತ ನಿರ್ಮಾಣಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಶಂಕುಸ್ಥಾಪನೆ ಕಬಡ್ಡಿ ಆಟ ಒಂದು ನಾಣ್ಯದ ಎರಡು ಮುಖವಿದ್ದಂತೆ :ಸಿದ್ದಣ ದುರದುಂಡಿ     ಸಮಾಜಮುಖಿಯಾದ ಯುವ ಶಕ್ತಿಯಿಂದ ಮಾತ್ರವೇ ಸಮೃದ್ಧ ಗ್ರಾಮಗಳ ನಿರ್ಮಾಣ ಸಾಧ್ಯ- ಡಾ. ಆರ್.ಬಿ. ಪಾಟೀಲ.ಮಾರುತಿ ಮಾಂಗ ಅವರಿಗೆ ಪಿಎಚ್.ಡಿ ಪ್ರದಾನ