LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ರೈತರಿಗೆ ಆಸೆ ತೋರಿಸಿ ಭೂಮಿ ಕಬಳಿಕೆ ಯತ್ನ: ಮಡುಸಾಹುಕಾರ ಆರೋಪ

ಪವನ ವಿದ್ಯುತ್ ಘಟಕ ಸ್ಥಾಪನೆಯೊಂದಿಗೆ ವಿಂಡ್ ಪ್ಯಾನ್ ಅಳವಡಿಕೆ ಯೋಜನೆಗೆ ರೈತರ ತೀವ್ರ ವಿರೋಧ ಜನಪ್ರತಿನಿಧಿಗಳು, ಅಧಿಕಾರಿಗಳು ಏಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ತಾಳಿಕೋಟೆ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪವನ ವಿದ್ಯುತ್ (ವಿಂಡ್‌ಮಿಲ್) ಘಟಕಗಳನ್ನು ಅಳವಡಿಸುವ ಉದ್ದೇಶದಿಂದ ರೈತರ ಜಮೀನುಗಳನ್ನು ಖರೀದಿ ಹಾಗೂ ಲೀಸ್ ಆಧಾರದ ಮೇಲೆ ಪಡೆಯುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಸ್ಥಳೀಯ ರೈತರು ಹಾಗೂ ರೈತ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
        ತಾಲೂಕಿನ ಬಿ.ಸಾಲವಾಡಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪವನ ವಿದ್ಯುತ್ ಘಟಕಗಳ ಸ್ಥಾಪನೆಯ ಮೂಲಕ ವಿಂಡ್ ಪ್ಯಾನ್ ಅಳವಡಿಕೆಗಾಗಿ ಕಂಪನಿಯ ಪ್ರತಿನಿಧಿಗಳು ರೈತರನ್ನು ಸಂಪರ್ಕಿಸಿ ಜಮೀನು ಪಡೆಯಲು ಮುಂದಾಗಿದ್ದಾರೆ. ಒಂದು ಎಕರೆ ಜಮೀನಿಗೆ ೧೫ ಲಕ್ಷದವರೆಗೆ ಹಣ ನೀಡಿ ಖರೀದಿಸುವುದಾಗಿ ಹಾಗೂ ಉಳಿದ ಜಮೀನನ್ನು ಪ್ರತಿ ಎಕರೆಗೆ ತಿಂಗಳಿಗೆ ೧೫ ಸಾವಿರ ಬಾಡಿಗೆ ಆಧಾರದ ಮೇಲೆ ಪಡೆಯುವುದಾಗಿ ರೈತರಿಗೆ ತಿಳಿಸಿ ಆಮಿಷವೊಡ್ಡಲಾಗುತ್ತಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಹಾಗೂ ರೈತ ಮುಖಂಡ ಮಡುಸಾಹುಕಾರ ಬಿರಾದಾರ ಆರೋಪಿಸಿದ್ದಾರೆ.
      ಮಂಗಳವಾರರಂದು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರೈತರ ಜಮೀನುಗಳು ಕೃಷಿಗೆ ಪ್ರಮುಖ ಆಧಾರವಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಮೊತ್ತದ ಹಣದ ಆಸೆಗೆ ಒಳಗಾಗಿ ಅಮೂಲ್ಯ ಕೃಷಿ ಭೂಮಿಯನ್ನು ಮಾರಾಟ ಮಾಡುವುದು ಅಥವಾ ದೀರ್ಘಾವಧಿಗೆ ಲೀಸ್ ನೀಡುವುದು ಭವಿಷ್ಯದಲ್ಲಿ ರೈತರಿಗೇ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಹೀಗಾಗಿ ಕಂಪನಿಯವರು ನೀಡುತ್ತಿರುವ ಭರವಸೆ ಹಾಗೂ ಒಪ್ಪಂದಗಳ ಬಗ್ಗೆ ರೈತರು ಸಂಪೂರ್ಣ ಮಾಹಿತಿ ಪಡೆದು, ಯಾವುದೇ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಅವರು ಮನವಿ ಮಾಡಿದ್ದಾರೆ.
ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳೇ ಟಾರ್ಗೆಟ್
      ಪವನ ವಿದ್ಯುತ್ ಘಟಕಗಳನ್ನು ಅಳವಡಿಸಲು ರಸ್ತೆ ಸಂಪರ್ಕ ಹೊಂದಿರುವ ಹಾಗೂ ದೊಡ್ಡ ಪ್ರಮಾಣದ ಜಮೀನುಗಳನ್ನು ಹೊಂದಿರುವ ರೈತರ ಭೂಮಿಯನ್ನು ಪ್ರಮುಖವಾಗಿ ಟಾರ್ಗೇಟ್ ಮಾಡಿಕೊಂಡು ಜಮೀನು ಪಡೆಯುವ ಪ್ರಯತ್ನದೊಂದಿಗೆ ಸುತ್ತಲಿನ ಜಮೀನು ರೈತರಿಗೆ ಆಸೆ ತೋರಿಸಿ ಕಬಳಿಸುವ ಹುನ್ನಾರ ನಡೆಯುತ್ತಿದೆ ರೈತರ ಜಮೀನಿನ ಒಂದು ಭಾಗವನ್ನು ಖರೀದಿಸಿ ಅಥವಾ ಲೀಸ್‌ಗೆ ಪಡೆದುಕೊಂಡ ನಂತರ, ಅದರ ಸುತ್ತಮುತ್ತಲಿನ ಕೃಷಿ ಜಮೀನುಗಳ ಮೇಲೂ ಯೋಜನೆಯ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಕೇವಲ ಜಮೀನು ನೀಡುವ ರೈತರಷ್ಟೇ ಅಲ್ಲದೆ, ಪಕ್ಕದ ಜಮೀನು ಹೊಂದಿರುವ ರೈತರ ಹಿತಾಸಕ್ತಿಯನ್ನೂ ಪರಿಗಣಿಸಬೇಕು ಎಂದು ರೈತ ಮುಖಂಡ ಮಡುಸಾಹುಕಾರ ಬಿರಾದಾರ ಅವರು ತಿಳಿಸಿದ್ದಾರೆ. 
   ತೇವಾಂಶದ ಕೊರತೆಯ ಆತಂಕ
        ತಾಳಿಕೋಟೆ ತಾಲೂಕು ಸೇರಿದಂತೆ ವಿಜಯಪುರ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯ ಕೊರತೆ ಹಾಗೂ ತೇವಾಂಶದ ಸಮಸ್ಯೆ ಈಗಾಗಲೇ ರೈತರನ್ನು ಕಾಡುತ್ತಿದೆ. ಕೃಷಿ ಸಂಪೂರ್ಣವಾಗಿ ಮಳೆ ಹಾಗೂ ಭೂಮಿಯಲ್ಲಿನ ತೇವಾಂಶವನ್ನು ಅವಲಂಬಿಸಿರುವ ಸಂದರ್ಭದಲ್ಲಿ ಪವನ ವಿದ್ಯುತ್ ಘಟಕಗಳ ನಿರ್ಮಾಣ ಹಾಗೂ ಅದಕ್ಕೆ ಸಂಬಂಧಿಸಿದ ಕಾಮಗಾರಿಗಳಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ವಿಂಡ್‌ಮಿಲ್‌ಗಳ ಅಳವಡಿಕೆಗಾಗಿ ರಸ್ತೆ ನಿರ್ಮಾಣ, ಭೂಮಿ ಸಮತಟ್ಟು ಮಾಡುವುದು ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಕೃಷಿ ಜಮೀನುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಘಟಕಗಳ ಸುತ್ತಮುತ್ತಲಿನ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಡೆಸಲು ಯಾವುದೇ ನಿರ್ಬಂಧಗಳು ಅಥವಾ ತೊಂದರೆಗಳು ಎದುರಾಗುತ್ತವೆಯೇ ಎಂಬುದರ ಕುರಿತು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಮಡುಸಾಹುಕಾರ ಬಿರಾದಾರ ಅವರು ಒತ್ತಾಯಿಸಿದ್ದಾರೆ.
   ಏತ ನೀರಾವರಿ ಯೋಜನೆಯಿಂದ ಭೂಮಿಗೆ ಹೆಚ್ಚುತ್ತಿರುವ ಮಹತ್ವ
       ಬೂದಿಹಾಳ-ಫಿರಾಪುರ ಏತ ನೀರಾವರಿ ಯೋಜನೆಯ ಕೊನೆಯ ಹಂತದ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಈ ಭಾಗದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯುವ ನಿರೀಕ್ಷೆ ಇದೆ. ನೀರಾವರಿ ಸೌಲಭ್ಯ ಲಭ್ಯವಾದ ನಂತರ ಕೃಷಿ ಭೂಮಿಯ ಉತ್ಪಾದಕತೆ ಹಾಗೂ ಮೌಲ್ಯ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ರೈತರು ಕೇವಲ ತಕ್ಷಣ ದೊರೆಯುವ ಹಣದ ಆಮಿಷಕ್ಕೆ ಒಳಗಾಗಿ ತಮ್ಮ ಅಮೂಲ್ಯ ಜಮೀನನ್ನು ಮಾರಾಟ ಮಾಡಬಾರದು. ಭವಿಷ್ಯದ ಪೀಳಿಗೆಯ ದೃಷ್ಟಿಯಿಂದಲೂ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಮಡುಸಾಹುಕಾರ ಬಿರಾದಾರ ಹೇಳಿದ್ದಾರೆ.
   ರೈತರಲ್ಲಿ ಜಾಗೃತಿ ಮೂಡಿಸುವ ಅಗತ್ಯ
        ಪವನ ವಿದ್ಯುತ್ ಯೋಜನೆಗೆ ಜಮೀನು ನೀಡುವ ಮುನ್ನ ಕಂಪನಿಯೊಂದಿಗೆ ಮಾಡಿಕೊಳ್ಳುವ ಒಪ್ಪಂದ, ಜಮೀನಿನ ಬಳಕೆಯ ಅವಧಿ, ಖರೀದಿ ಅಥವಾ ಲೀಸ್ ಷರತ್ತುಗಳು, ರೈತರ ಹಕ್ಕುಗಳು, ಭವಿಷ್ಯದಲ್ಲಿ ಜಮೀನಿನ ಬಳಕೆಯ ಸ್ಥಿತಿ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ರೈತರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಯೋಜನೆಯ ಸಂಪೂರ್ಣ ವಿವರಗಳನ್ನು ರೈತರಿಗೆ ತಿಳಿಸಬೇಕು. ರೈತರ ಆಕ್ಷೇಪಣೆಗಳನ್ನು ದಾಖಲಿಸಿಕೊಂಡು, ಪರಿಸರ ಹಾಗೂ ಕೃಷಿ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಂಬಂಧಪಟ್ಟ ಇಲಾಖೆಗಳು ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
   ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
          ಪವನ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ರೈತರಲ್ಲಿ ಉಂಟಾಗಿರುವ ಆತಂಕವನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಬೇಕು. ರೈತರ ಜಮೀನುಗಳನ್ನು ಪಡೆಯುವ ಪ್ರಕ್ರಿಯೆ ಕಾನೂನುಬದ್ಧವಾಗಿದೆಯೇ, ಅಗತ್ಯ ಅನುಮತಿಗಳನ್ನು ಪಡೆದಿದ್ದಾರೆಯೇ ಹಾಗೂ ಕೃಷಿ ಭೂಮಿಯ ಮೇಲೆ ಯೋಜನೆಯಿಂದ ಯಾವುದೇ ದುಷ್ಪರಿಣಾಮ ಉಂಟಾಗಲಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು ರೈತರ ಅನುಮತಿ ಹಾಗೂ ಹಿತಾಸಕ್ತಿಯನ್ನು ಕಡೆಗಣಿಸಿ ಯಾವುದೇ ರೀತಿಯಲ್ಲಿ ಜಮೀನು ಪಡೆಯುವ ಪ್ರಯತ್ನ ನಡೆದರೆ ಅದನ್ನು ವಿರೋಧಿಸಲಾಗುವುದು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ರೈತರ ಆತಂಕವನ್ನು ಪರಿಹರಿಸಬೇಕು. ಇಲ್ಲವಾದಲ್ಲಿ ತಾಲೂಕಿನ ರೈತರನ್ನು ಒಗ್ಗೂಡಿಸಿ ಹೋರಾಟ ನಡೆಸಲಾಗುವುದು ಎಂದು ಮಡುಸಾಹುಕಾರ ಬಿರಾದಾರ ಎಚ್ಚರಿಕೆ ನೀಡಿದ್ದಾರೆ.
ಈ ಸಮಯದಲ್ಲಿ ವೀರೇಶ ಕಾರಗನೂರ, ಸಾಹೇಬಗೌಡ ಪಾಟೀಲ, ಭೀಮನಗೌಡ ತಂಗಡಗಿ, ಬಾಲಣ್ಣ ಬರದೇನಾಳ, ಉಮೇಶ ಮೈಲೇಶ್ವರ, ಮೊದಲಾದವರು ಉಪಸ್ಥಿತರಿದ್ದರು.
---    
    ರೈತರ ಅಮೂಲ್ಯ ಕೃಷಿ ಭೂಮಿಯನ್ನು ಹಣದ ಆಮಿಷ ತೋರಿಸಿ ಪಡೆದುಕೊಳ್ಳುವ ಪ್ರಯತ್ನವನ್ನು ತಡೆಯಬೇಕು. ಭೂಮಿ ಕಳೆದುಕೊಂಡ ನಂತರ ಪಶ್ಚಾತ್ತಾಪಪಡುವ ಪರಿಸ್ಥಿತಿ ರೈತರಿಗೆ ಬರಬಾರದು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಕುರಿತು ಪರಿಶೀಲನೆ ನಡೆಸಿ ರೈತರ ಹಿತ ಕಾಪಾಡಬೇಕು. ಇಲ್ಲವಾದರೆ ತಾಲೂಕಿನ ರೈತರೊಂದಿಗೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ.
                                                 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ ಆಸೆ ತೋರಿಸಿ ಭೂಮಿ ಕಬಳಿಕೆ ಯತ್ನ: ಮಡುಸಾಹುಕಾರ ಆರೋಪ*ಶಾಸಕ ನಿಖಿಲ್ ಕತ್ತಿ ಹೇಳಿಕೆಗೆ ಖಡಕ್ ಕೌಂಟರ್ ಕೊಟ್ಟ ಸಂಸದೆ ಪ್ರಿಯಂಕಾ ಜಾರಕಿಹೊಳಿ*ಬೆಳಗಾವಿ ಗ್ರಾಮೀಣ ಕ್ಷೇತ್ರದ 366 ದೇವಸ್ಥಾನಗಳಿಗೆ 3 ಕಂತಿನ ಹಣ ವಿತರಿಸಿದ ಹೆಬ್ಬಾಳಕರ.  ಶಾಸಕ ಅಪ್ಪಾಜಿ ನಾಡಗೌಡರ ಮನವಿಗೆ ಸರ್ಕಾರ ಸ್ಪಂದನೆ: ಇಂದಿನಿಂದ ಕೆರೆಗಳಿಗೆ ನೀರುವನ್ಯಜೀವಿ ಬೇಟೆ ಶಿಕ್ಷಾರ್ಹ ಅಪರಾಧ: ಇಂಡಿ ಅರಣ್ಯ ಇಲಾಖೆಯಿಂದ ಗ್ರಾಮಸ್ಥರಿಗೆ ಜಾಗೃತಿ"ನಾನು ಶಾಸಕನಾಗಿ ಬಂದಿಲ್ಲ, ಮಠದ ಭಕ್ತನಾಗಿ ಬಂದಿದ್ದೇನೆ" – ಯಶವಂತರಾಯಗೌಡ ಪಾಟೀಲಇಂಡಿಯಲ್ಲಿ ಶಿರಸಂಗಿ ಲಿಂಗರಾಜರ ವೃತ್ತ ನಿರ್ಮಾಣಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಶಂಕುಸ್ಥಾಪನೆ ಕಬಡ್ಡಿ ಆಟ ಒಂದು ನಾಣ್ಯದ ಎರಡು ಮುಖವಿದ್ದಂತೆ :ಸಿದ್ದಣ ದುರದುಂಡಿ     ಸಮಾಜಮುಖಿಯಾದ ಯುವ ಶಕ್ತಿಯಿಂದ ಮಾತ್ರವೇ ಸಮೃದ್ಧ ಗ್ರಾಮಗಳ ನಿರ್ಮಾಣ ಸಾಧ್ಯ- ಡಾ. ಆರ್.ಬಿ. ಪಾಟೀಲ.ಮಾರುತಿ ಮಾಂಗ ಅವರಿಗೆ ಪಿಎಚ್.ಡಿ ಪ್ರದಾನ