ಬೆಳಗಾವಿ: ತಮ್ಮ 27ನೇ ಜನ್ಮದಿನವನ್ನು ಸಮಾಜಮುಖಿ ಹಾಗೂ ಪರಿಸರಪರ ಕಾಳಜಿಯೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ, ಕರ್ನಾಟಕ ಅಪೆಕ್ಸ್ ಬ್ಯಾಂಕ್ ಮತ್ತು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಸತೀಶ್ ಜಾರಕಿಹೊಳಿ ಅವರು ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಎರಡು ಚಿರತೆಗಳು ಹಾಗೂ ಒಂದು ಸಿಂಹವನ್ನು ದತ್ತು ಪಡೆದು, ಅವುಗಳ ಆರೈಕೆ ಮತ್ತು ಪೋಷಣೆಗೆ ಮುಂದಾಗಿದ್ದಾರೆ.
ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಉತ್ತರ ಕರ್ನಾಟಕದ ಏಕೈಕ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ವನ್ಯಜೀವಿಗಳನ್ನು ದತ್ತು ಪಡೆಯುವ ಮೂಲಕ ರಾಹುಲ್ ಜಾರಕಿಹೊಳಿ ಅವರು ತಮ್ಮ ಜನ್ಮದಿನವನ್ನು ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಸಾರ್ಥಕ ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ.
ಇದಕ್ಕೂ ಮುನ್ನ ಅವರ ತಂದೆ, ಶಾಸಕ ಸತೀಶ್ ಜಾರಕಿಹೊಳಿ ಅವರ ಜನ್ಮದಿನದ ಅಂಗವಾಗಿಯೂ ಇದೇ ಮೃಗಾಲಯದಲ್ಲಿ ಒಂದು ಸಿಂಹವನ್ನು ದತ್ತು ಪಡೆಯಲಾಗಿದ್ದು, ಅದರ ಆರೈಕೆ ಮತ್ತು ಪೋಷಣೆಗೆ ನೆರವು ನೀಡಲಾಗುತ್ತಿದೆ. ಈ ಮೂಲಕ ಜಾರಕಿಹೊಳಿ ಕುಟುಂಬವು ವನ್ಯಜೀವಿಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ಕಲ್ಯಾಣದ ಬಗ್ಗೆ ಕಾಳಜಿ ವ್ಯಕ್ತಪಡಿಸಿದೆ.
ವನ್ಯಜೀವಿಗಳ ಸಂರಕ್ಷಣೆ, ಪ್ರಾಣಿ-ಪಕ್ಷಿಗಳ ಮೇಲಿನ ಕಾಳಜಿ ಹಾಗೂ ಪ್ರಕೃತಿಯ ಸಮತೋಲನವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂತಹ ಪ್ರಯತ್ನಗಳು ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಮುಂದಿನ ಪೀಳಿಗೆಗೆ ವನ್ಯಜೀವಿಗಳ ಮಹತ್ವವನ್ನು ಪರಿಚಯಿಸಲು ಸಹಕಾರಿಯಾಗಲಿವೆ ಎಂಬ ಆಶಯವನ್ನು ರಾಹುಲ್ ಜಾರಕಿಹೊಳಿ ಹೊಂದಿದ್ದಾರೆ.
ಹುಟ್ಟುಹಬ್ಬದ ಸಂಭ್ರಮವನ್ನು ಕೇವಲ ವೈಯಕ್ತಿಕ ಆಚರಣೆಗೆ ಸೀಮಿತಗೊಳಿಸದೆ, ಪ್ರಕೃತಿ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಕೊಡುಗೆ ನೀಡುವ ಮೂಲಕ ಅರ್ಥಪೂರ್ಣವಾಗಿಸಿರುವುದು ಈ ಕಾರ್ಯದ ವಿಶೇಷತೆಯಾಗಿದೆ.