ಅಥಣಿ: ಗಣೇಶ ಚತುರ್ಥಿ ಹಬ್ಬವನ್ನು ಎಲ್ಲರೂ ಪರಸ್ಪರ ಶಾಂತಿ ಹಾಗೂ ಸೌಹಾರ್ದತೆಯಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಆಚರಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಹಾಗೂ ಗಣೇಶೋತ್ಸವ ಮಂಡಳ/ಸಮಿತಿಗಳು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅಥಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳ್ಳಿ ಸೂಚನೆ ನೀಡಿದರು.
ಅವರು ಪಟ್ಟಣದ ಪೋಲಿಸ್ ಸಮುದಾಯ ಭವನದಲ್ಲಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಇಲಾಖೆಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಗಣೇಶೋತ್ಸವ ಆಚರಿಸುವ ಸಂಘ, ಮಂಡಳಿಗಳು ಸರ್ಕಾರ ಹೊರಡಿಸಿರುವ ಸುತ್ತೋಲೆಯ ಅಂಶಗಳನ್ನು ಪಾಲಿಸಬೇಕು. ಮಾರ್ಗಸೂಚಿಗಳನ್ನು ಅನುಸರಿಸಿ ಹಬ್ಬವನ್ನು ಆಚರಿಸಬೇಕು ಮಂಟಪಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ರಾತ್ರಿ 10 ಗಂಟೆಗೆ ಧ್ವನಿವರ್ಧಕಗಳನ್ನು ಬಂದ ಮಾಡಬೇಕು. ವಿದ್ಯುತ್ ಸುರಕ್ಷತೆಯ ಬಗ್ಗೆ ನಿಗಾ ವಹಿಸಬೇಕು ಎಂದರು.
ಆನಂತರ ಸಿಪಿಐ ಸಂತೋಷ ಹಳ್ಳೂರ ಮಾತನಾಡಿ ಗಣೇಶೋತ್ಸವವು ಭಕ್ತಿ ಮತ್ತು ಸೌಹಾರ್ದತೆಯ ಹಬ್ಬವಾಗಿದೆ. ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಯುವಕರು ಉತ್ಸಾಹದ ಜೊತೆಗೆ ಶಿಸ್ತನ್ನು ಕಾಪಾಡಿಕೊಂಡು ಗಣೇಶ ಹಬ್ಬ ಆಚರಿಸಬೇಕು ಎಂದರು.
ಈ ವೇಳೆ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಮಾತನಾಡಿ ಸರ್ಕಾರ ನಿಗದಿಪಡಿಸಿರುವ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತುರ್ತು ವಾಹನಗಳು ಹಾಗೂ ಆಂಬ್ಯುಲೆನ್ಸ್ ಸೇವೆಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು.
ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಮೊದಲು. ಪೋಲೀಸ್ ಇಲಾಖೆ. ಪುರಸಭೆ, ಹೆಸ್ಕಾಂ, ಅಗ್ನಿಶಾಮಕ ಇಲಾಖೆಯವರಿಂದ ಪರವಾನಿಗೆ ಪಡೆಯಬೇಕು. ಸಾರ್ವಜನಿಕ ರಸ್ತೆಯಲ್ಲಿ ಜನರ ಹಾಗೂ ವಾಹನ ಓಡಾಟಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಪಿಸಬಾರದು. ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಅಜೀತ ಪವಾರ, ಸಂಪತ್ತಕುಮಾರ ಶೆಟ್ಟಿ, ಮತ್ತು ಶಶಿ ಸಾಳ್ವೆ ಸೇರಿದಂತೆ ಇತರರು ಮಾತನಾಡಿ ಯಾರಿಗೂ ತೊಂದರೆಯಾಗದಂತೆ ಮಾದರಿಯಾಗಿ ಗಣೇಶ ಹಬ್ಬವನ್ನು ಆಚರಿಸೋಣ. ಶ್ರೀ ಶಿವಯೋಗಿಗಳು ನಡೆದಾಡಿದ ನೆಲ ಪವಿತ್ರ ಪಾವನವಾಗಿದ್ದು ಶಾಂತಿ ಸೌಹಾರ್ದತೆ. ಸಹಬಾಳ್ವೆ ಹಾಗೂ ಸಹೋದರತೆಗೆ ಹೆಸರಾಗಿದೆ. ಗಣೇಶೋತ್ಸವದ ಮೂಲಕ ಸಮಾಜದಲ್ಲಿ ಒಗ್ಗಟ್ಟು, ಸಹೋದರತೆ ಮತ್ತು ಸೌಹಾರ್ದತೆ ಮತ್ತಷ್ಟು ಬಲಗೊಳ್ಳಬೇಕು. ಹಬ್ಬದ ಸಂಭ್ರಮದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇದನ್ನು ಅರಿತು ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಅವರು ಸಾರ್ವಜನಿಕ ಗಣೇಶ ಹಬ್ಬದ ಆಚರಣೆಗೆ ಏಕಗವಾಕ್ಷಿ ಪದ್ಧತಿಯಲ್ಲಿ ಯಾವುದೇ ಮಂಡಳದವರಿಗೆ ತೊಂದರೆಯಾಗದಂತೆ ಪರವಾನಿಗೆ ನೀಡುವ ವ್ಯವಸ್ಥೆ ಮಾಡಬೇಕು ಎಂದರು.
ಆನಂತರ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ಮಾತನಾಡಿ, ಸರ್ಕಾರ ಮತ್ತು ಪೊಲೀಸ್ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ,
ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐಗಳಾದ ಗಿರಿಮಲ್ಲಪ್ಪ ಉಪ್ಪಾರ, ಪ್ರಶಾಂತ ಬಾಗೇವಾಡಿ. ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಹೆಸ್ಕಾಂ ಅಧಿಕಾರಿ ನಜೀರ ಢಾಲಾಯತ್, ಮುಖಂಡರಾದ
ಅಜೀತ ಪವಾರ ಸಂಪತ್ತಕುಮಾರ ಶೆಟ್ಟಿ, ಶಶಿ ಸಾಳ್ವೆ, ಅಕ್ಷಯ್ ಬುರ್ಲಿ, ಮಹಾವೀರ ಅಚಾರಟ್ಟಿ ಸೇರಿದಂತೆ ಸಾರ್ವಜನಿಕರು ಗಣೇಶ ಮಂಡಳಿಯವರು ಉಪಸ್ಥಿತರಿದ್ದರು.