ಇಸ್ಲಾಮಾಬಾದ್,
ಪಾಕಿಸ್ತಾನ(Pakistan)ದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿಯನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಈ ಮೂಲಕ ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದ ಸುರಕ್ಷಿತ ತಾಣಗಳಲ್ಲಿ ಅಡಗಿರುವ ಉಗ್ರರ ಮೇಲೆ ನಡೆಯುತ್ತಿರುವ ದಾಳಿಗಳ ಸರಣಿ ಮತ್ತೊಂದು ತಿರುವು ಪಡೆದಿದೆ.
ಆರಂಭಿಕ ವರದಿಗಳ ಪ್ರಕಾರ, ಅಫ್ರಿದಿ ಮೇಲೆ ದಾಳಿಕೋರರು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಅಮೆರಿಕದಿಂದ ನಿಷೇಧಕ್ಕೊಳಗಾಗಿರುವ ಲಷ್ಕರ್ ಸಂಘಟನೆಯ ಕಾರ್ಯಾಚರಣೆಗಳಲ್ಲಿ ಅಫ್ರಿದಿ ಪ್ರಮುಖ ಕೊಂಡಿಯಾಗಿದ್ದ. ತನಿಖಾಧಿಕಾರಿಗಳ ಪ್ರಕಾರ, ಇದು ಪಕ್ಕಾ ಯೋಜಿತ ‘ಟಾರ್ಗೆಟೆಡ್ ಕಿಲ್ಲಿಂಗ್’ ಆಗಿದ್ದು, ದಾಳಿಕೋರರು ಅಫ್ರಿದಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ನೀಡಿಲ್ಲ.
ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಭಯೋತ್ಪಾದಕರಿಗೆ ಕಾಲ ಕೂಡಿ ಬಂದಂತಿದೆ, ಕಳೆದ ತಿಂಗಳು ಲಾಹೋರ್‌ನಲ್ಲಿ ಲಷ್ಕರ್ ಸ್ಥಾಪಕ ಸದಸ್ಯ ಅಮೀರ್ ಹಮ್ಜಾನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಹಿರಿಯ ಸಹೋದರ ತಾಹಿರ್ ಅನ್ವರ್ ಕೂಡ ನಿಗೂಢ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ.ರಿಯಾಸಿ ದಾಳಿಯ ಮಾಸ್ಟರ್‌ಮೈಂಡ್ ಕತಲ್ ಸಿಂಧಿಯನ್ನು ಕಳೆದ ವರ್ಷ ಝೇಲಂನಲ್ಲಿ ಹತ್ಯೆ ಮಾಡಲಾಗಿತ್ತು.
2023 ರಿಂದ ಪ್ರಾರಂಭವಾದ ಈ ಮಾದರಿಯ ಹತ್ಯೆಗಳು 2026 ರಲ್ಲಿ ತೀವ್ರಗೊಂಡಿವೆ. ಕೇವಲ ಈ ವರ್ಷವೊಂದರಲ್ಲೇ ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಸಂಘಟನೆಗಳಿಗೆ ಸಂಬಂಧಿಸಿದ ಕನಿಷ್ಠ 30 ಭಯೋತ್ಪಾದಕರನ್ನು ಲಾಹೋರ್, ಕರಾಚಿ ಮತ್ತು ಗಡಿ ಪ್ರದೇಶಗಳಲ್ಲಿ ಹತ್ಯೆ ಮಾಡಲಾಗಿದೆ. ಈ ‘ಅಪರಿಚಿತ ಬಂದೂಕುಧಾರಿಗಳು’ ಯಾರು ಎಂಬುದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ರಿಯಾಸಿ ದಾಳಿ ಮತ್ತು ಮುಂಬೈ ದಾಳಿಯ ಸಂಚುಕೋರರಿಗೆ ಆಪ್ತರಾಗಿದ್ದ ಕಮಾಂಡರ್‌ಗಳು ಒಬ್ಬೊಬ್ಬರಾಗಿ ಹತರಾಗುತ್ತಿರುವುದು ಲಷ್ಕರ್ ಮತ್ತು ಜೈಶ್‌ನಂತಹ ಸಂಘಟನೆಗಳ ಬೆನ್ನೆಲುಬು ಮುರಿದಂತಿದೆ. ಪಾಕಿಸ್ತಾನದ ನೆಲದಲ್ಲಿ ತಮಗೆ ರಕ್ಷಣೆ ಇಲ್ಲ ಎಂಬ ಸತ್ಯ ಈಗ ಭಯೋತ್ಪಾದಕರಿಗೆ ಅರಿವಾಗುತ್ತಿದೆ.