ಇಂಡಿ,ಮೇ.೨೩: ತಾಲೂಕಿನ ಲಚ್ಯಾಣ ಗ್ರಾಮದ ಶ್ರೀ ಸಿದ್ಧಲಿಂಗ ಮಹಾರಾಜರ ಭಕ್ತರ, ವ್ಯಾಪಾರಸ್ಥರ, ನೌಕರರ ಬಹುದಿನಗಳ ಬೇಡಿಕೆಯಾದ ಈ ಕ್ಷೇತ್ರದ ಮೂಲಕ ನಿತ್ಯ ಸೋಲಾಪೂರ ಸಂಪರ್ಕಿಸುವ ನೂತನ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವ ಒತ್ತಾಯಕ್ಕೆ ಈ ಭಾಗದ ಶಾಸಕ ಯಶವಂತರಾಯಗೌಡ ಪಾಟೀಲ ಕೂಡಲೇ ಸ್ಪಂದಿಸಿ ಶುಕ್ರವಾರದಂದು ನಗರದ ಪ್ರವಾಸಿ ಮದಿರದಲ್ಲಿ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ತಾಲೂಕಿನ ಸುಕ್ಷೇತ್ರ ಲಚ್ಯಾಣದ ಆರಾದ್ಯ ದೇವ ಶ್ರೀ ಸಿದ್ಧಲಿಂಗ ಮಹಾರಾಜರ ದರ್ಶನಕ್ಕೆ ನೆರೆಯ ಮಹಾರಾಷ್ಟ್ರದ ಸೋಲಾಪೂರ ನಗರದಿಂದ ಬರುವ ಅಪಾರ ಸಂಖ್ಯೆಯ ಭಕ್ತರಿಗೆ, ಲಚ್ಯಾಣ ಹಾಗೂ ಸುತ್ತಲ ಗ್ರಾಮದ ವ್ಯಾಪಾಸ್ಥರಿಗೆ ಸೋಲಾಪೂರದಿಂದ ತಮ್ಮೂರಿಗೆ ನೇರವಾಗಿ ಬರಲು ಸಂಜೆ ವೇಳೆ ರೈಲು ಸೌಲಭ್ಯ ಇಲ್ಲದ ಕಾರಣ ತೀವ್ರ ತೊಂದರೆ ಆಗುತ್ತಿತ್ತು. ಆದ್ದರಿಂದ ಪ್ರಯಾಣಿಕರ ಅನೂಲಕ್ಕಾಗಿ ಈ ಸೌಲಭ್ಯ ಕಲ್ಪಿಸಲಾಗಿದೆ. ಯಾತ್ರಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಸಿಂದಗಿ ಬಸ್ ನಿಲ್ದಾಣದಿಂದ ಇಂಡಿ ತಲುಪುವ ಈ ಬಸ್ಸು ಇಂಡಿ ಪಟ್ಟಣದ ಬಸ್ ನಿಲ್ದಾಣದಿಂದ ನಿತ್ಯ ಮಧ್ಯಾಹ್ನ ೩.೪೫ ಗಂಟೆಗೆ ಬಿಡುವ ಈ ನೂತನ ಬಸ್ಸು ಸಂಜೆ ೪.೧೦ ಗಂಟೆಗೆ ಲಚ್ಯಾಣ ಕ್ಷೇತ್ರ ತಲುಪಿ ಬಳಿಕ ಅಹಿರಸಂಗ, ಭೈರುಣಗಿ, ಭತಗುಣಕಿ, ಹಲಸಂಗಿ, ಧುಳಖೇಡ ಮಾರ್ಗದ ಮೂಲಕ ಸೋಲಾಪೂರ ಕೇಂದ್ರ ಬಸ್ ನಿಲ್ದಾಣ ತಲುಪಲಿದೆ.
ಸಂಜೆ ಸೋಲಾಪೂರ ಬಸ್ ನಿಲ್ದಾಣದಿಂದ ೭ ಗಂಟೆಗೆ ಬಿಡುವ ಈ ಬಸ್ಸು ಇದೇ ಮಾರ್ಗವಾಗಿ ಮರಳಿ ಲಚ್ಯಾಣ ಕ್ಷೇತ್ರದ ಮೂಲಕ ಇಂಡಿ ಬಸ್ ನಿಲ್ದಾಣ ತಲುಪಿ ಅಲ್ಲಿಂದ ಸಿಂದಗಿ ಬಸ್ ನಿಲ್ದಾಣ ತಲುಪಲಿದೆ.
ನೂತನ ಬಸ್ ಗೆ ಚಾಲನೆ ನೀಡುವ ಸಂದರ್ಭದಲ್ಲಿ ಎಸಿ ಚಿದಾನಂದ ಗುರುಸ್ವಾಮಿ, ಇಂಡಿ ತಹಶೀಲ್ದಾರ ಕಡಕಭಾವಿ, ಕೃಷಿ ಇಲಾಖೆಯ ಏಇಓ ಮಹಾದೇವಪ್ಪ ಏವೂರ, ಧನರಾಜ ಮುಜಗೊಂಡ ಇಂಡಿ ಸಾರಿಗೆ ಘಟಕದ ವ್ಯವಸ್ಥಾಪಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
***
