ಜೂನ್ ತಿಂಗಳಿನಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ, ಭಾರೀ ಮಳೆಯಿಂದಾಗಿ ಸುಮಾರು 5.29 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಈ ಬಗ್ಗೆ ಸಮೀಕ್ಷೆ ಮಾಡಿ ಮಾಹಿತಿ ಕಲೆಹಾಕಲಾಗಿದೆ. ಪರಹಾರದ ಮೊತ್ತ ಪಾವತಿಗೆ ಸಿದ್ಧವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಭೀಮಾ ಜಲಾನಯನ ಪ್ರದೇಶದಲ್ಲಿನ ಪ್ರವಾಹದೊಂದಿಗೆ ಸೆಪ್ಟೆಂಬರ್‌ನಲ್ಲಿಉತ್ತರ ಕರ್ನಾಟಕದ ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿದ್ದವು. ಎರಡನೇ ಸುತ್ತಿನ ಪ್ರವಾಹವು ಮುಖ್ಯವಾಗಿ ಕಲಬುರಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸುಮಾರು 7.24 ಲಕ್ಷ ಹೆಕ್ಟೇರ್‌ಗಳಷ್ಟು ಹೆಚ್ಚುವರಿ ಬೆಳೆ ನಷ್ಟಕ್ಕೆ ಕಾರಣವಾಯಿತು. ಈ ನಾಲ್ಕು ಜಿಲ್ಲೆಗಳಲ್ಲಿ ಜಂಟಿ ಕ್ಷೇತ್ರ ಸಮೀಕ್ಷೆಯನ್ನು ಪುನಃ ಮಾಡಿ ನಷ್ಟದ ಬಗ್ಗೆ ಲೆಕ್ಕಾಚಾರ ಪರಿಷ್ಕರಣೆ ಮಾಡುತ್ತೇವೆ. ಇದು ಸುಮಾರು 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸುಮಾರು 5.29 ಲಕ್ಷ ಹೆಕ್ಟೇರ್ಗಳ ಮೊದಲ ಸುತ್ತಿನ ಬೆಳೆ ನಷ್ಟಕ್ಕೆ ಪರಿಹಾರದ ಮೊತ್ತ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಜ್ಯ ಸರ್ಕಾರವು ತನ್ನ ಬೊಕ್ಕಸದಿಂದ ಪ್ರತಿ ಹೆಕ್ಟೇರ್ಗೆ 8,500 ರೂ.ಗಳನ್ನು ನೀಡುತ್ತಿದೆ. ಇದರಿಂದಾಗಿ ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್ಗೆ 17,000 ರೂ.ಗಳು, ನೀರಾವರಿ ಬೆಳೆಗಳಿಗೆ 25,500 ರೂ.ಗಳು ಮತ್ತು ದೀರ್ಘಕಾಲಿಕ ಬೆಳೆಗಳಿಗೆ 31,000 ರೂ.ಗಳು ಪಾವತಿಯಾಗಲಿದೆ ಎಂದು ಅವರು ವಿವರಿಸಿದ್ದಾರೆ.