ಬಳ್ಳಾರಿ, ನ.14:: ತುಂಗಭದ್ರಾ ಜಲಾಶಯದಿಂದ ರೈತರ ಬೆಳೆಗಳ ಹಿತದೃಷ್ಟಿಯಿಂದ ಡಿಸೆಂಬರ್ 10ರವರೆಗೆ ನೀರು ಪೂರೈಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ಅಕ್ಕಿ ಕೃಷ್ಣ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಅಕ್ಕಿ ಕೃಷ್ಣ, ರಾಜ್ಯದ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ನವೆಂಬರ್ 20ರವರೆಗೆ ನೀರು ಹರಿಸುವುದಾಗಿ ಭರವಸೆ ನೀಡಿದ್ದರಿಂದ ರೈತರು ನಿರೀಕ್ಷೆಯೊಂದಿಗೆ ಕಾಯುತ್ತಿದ್ದಾರೆ. ಆದರೆ ನವೆಂಬರ್ 15ರವರೆಗೆ ಮಾತ್ರ ನೀರು ಸ್ಥಗಿತಗೊಳಿಸುವ ಆತಂಕ ರೈತರಲ್ಲಿ ಉಂಟಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಮೆಣಸಿನಕಾಯಿ, ಹತ್ತಿ, ಜೋಳ ಹಾಗೂ ಭತ್ತ ಸೇರಿದಂತೆ ವಿವಿಧ ಬೆಳೆಗಳು ಕಟಾವಿನ ಹಂತ ತಲುಪಲು ಡಿಸೆಂಬರ್ 10ರವರೆಗೆ ನೀರಿನ ಅವಶ್ಯಕತೆಯಿದೆ. ಆದ್ದರಿಂದ ಆನ್-ಆಫ್ ಪದ್ಧತಿಯಲ್ಲಿ ನೀರು ಹರಿಸಿದರೆ ಬೆಳೆಗಳು ಕೈ ಸೇರುತ್ತವೆ. ಇಲ್ಲವಾದಲ್ಲಿ ರೈತರು ಅಪಾರ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಸಚಿವ ಸಂತೋಷ್ ಲಾಡ್ ಅವರು ಜನವರಿಯಲ್ಲಿ 20 ಟಿಎಂಸಿ ನೀರನ್ನು 10 ದಿನಗಳ ಕಾಲ ಹರಿಸುವಂತೆ ತಿಳಿಸಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಿ ರೈತರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಬೇವಿನಗಿಡದ ಎರ್ರಿಸ್ವಾಮಿ, ಸಂಘದ ಪದಾಧಿಕಾರಿಗಳಾದ ರಾಯಪುರ ಮರಿಸ್ವಾಮಿ, ವಿರೇಶಿ ಬೈಲೂರು, ಬಸವಲಿಂಗಯ್ಯ ಸ್ವಾಮಿ, ಉಮಾಮಹೇಶ್ವರಪ್ಪ, ಗೋವಿಂದ, ಪೆನ್ನಪ್ಪ, ಕೋನಪ್ಪ, ಹೇಮರೆಡ್ಡಿ, ಸಿದ್ದಪ್ಪ, ಶರಣಬಸಯ್ಯ, ಮಂಜುನಾಥ್, ವೆಂಕಟರೆಡ್ಡಿ, ಬಸವರಾಜ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.