ಧಾರವಾಡ ,a,13 : ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಧಾರವಾಡದ (ಐಐಐಟಿ ಧಾರವಾಡ) ಏಳು ವಿದ್ಯಾರ್ಥಿಗಳನ್ನೊಳಗೊಂಡ ಟೀಮ್ ಐಕಾರಸ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಇಸ್ರೋ ರೋಬೋಟಿಕ್ಸ್ ಚಾಲೆಂಜ್–2026 ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿ, ತಂಡವು ರೂ. 2 ಲಕ್ಷ ನಗದು ಬಹುಮಾನವನ್ನು ಪಡೆದುಕೊಂಡಿದೆ ಎಂದು ಸಂಸ್ಥೆಯ ಪೆÇ್ರಪೆಸರ್ ಆಫ್ ಪ್ರಾಕ್ಟೀಸ್ ಮಲ್ಲಿಕಾರ್ಜುನ ಕಂಡೆ ಅವರು ತಿಳಿಸಿದರು.
ಅವರು ಇಂದು (ಅ.13) ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿ ಜರುಗಿಸಿ, ಮಾತನಾಡಿದರು.
ನಾಲ್ಕು ಹಂತಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಾಥಮಿಕ, ಅರ್ಹತಾ, ಎಲಿಮಿನೇಷನ್ ಮತ್ತು ಅಂತಿಮ ಸುತ್ತುಗಳಲ್ಲಿ ಟೀಮ್ ಐಕಾರಸ್ ಮೊದಲ ಮೂರು ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಅಂತಿಮ ಸುತ್ತಿಗೆ ಆಯ್ಕೆಯಾದ 20 ತಂಡಗಳಲ್ಲಿ ಸ್ಥಾನ ಪಡೆದಿತ್ತು. ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರದಲ್ಲಿ (URSC) ಅಂತಿಮ ಸುತ್ತು ನಡೆಯಿತು.
ಸ್ಪರ್ಧೆಗಾಗಿ ತಂಡವು ಜಿಪಿಎಸ್ ಸೌಲಭ್ಯವಿಲ್ಲದ, ಮಂಗಳ ಗ್ರಹದ ಪರಿಸರವನ್ನು ಹೋಲುವ ಪ್ರದೇಶದಲ್ಲಿ ಕಾರ್ಯನಿರ್ವಹಿಸಬಲ್ಲ ಸ್ವಯಂಚಾಲಿತ ಭಾರವಾಹಕ ಕ್ವಾಡ್ಕಾಪ್ಟರ್ ಡ್ರೋನ್ ಅನ್ನು ಅಭಿವೃದ್ಧಿಪಡಿಸಿತು. ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂಚಾಲಿತವಾಗಿ ಸಂಚರಿಸುವುದು, ನಿಗದಿತ ಗುರಿಗಳನ್ನು ಗುರುತಿಸುವುದು, ಕಾರ್ಯಾಚರಣೆಗಳನ್ನು ಪೂರ್ಣಗೊಳಿಸುವುದು ಮತ್ತು ನಿಗದಿತ ನೆಲೆಗೆ ಮರಳುವುದು ಈ ಡ್ರೋನ್ ಪ್ರಮುಖ ಸಾಮಥ್ರ್ಯಗಳಾಗಿವೆ ಎಂದು ತಿಳಿಸಿದರು.
ಡ್ರೋನ್‍ನ ಅಭಿವೃದ್ಧಿಯಲ್ಲಿ ದೃಶ್ಯ-ಜಡತ್ವ ಆಧಾರಿತ ಸಂಚಲನ (Visual-Inertial Navigation), ಆಪ್ಟಿಕಲ್ ಫ್ಲೋ ಆಧಾರಿತ ಸಂಚಲನ ಮತ್ತು ಕಂಪ್ಯೂಟರ್ ವಿಷನ್ ಆಧಾರಿತ ಗುರಿ ಗುರುತಿಸುವ ತಂತ್ರಜ್ಞಾನಗಳನ್ನು ಬಳಸಲಾಯಿತು. ಈ ತಂತ್ರಜ್ಞಾನಗಳ ಸಂಯೋಜನೆ, ಪರೀಕ್ಷೆ ಮತ್ತು ತಾಂತ್ರಿಕ ಸವಾಲುಗಳನ್ನು ಪರಿಹರಿಸುವ ಮೂಲಕ ತಂಡವು ತನ್ನ ನಾವೀನ್ಯತೆ ಹಾಗೂ ತಾಂತ್ರಿಕ ಸಾಮಥ್ರ್ಯವನ್ನು ಪ್ರದರ್ಶಿಸಿತು ಎಂದು ಹೇಳಿದರು.
ಸ್ಪರ್ಧೆಯ ಫಲಿತಾಂಶಗಳನ್ನು ಅಹಮದಾಬಾದ್‍ನಲ್ಲಿ ನಡೆದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಕಟಿಸಲಾಯಿತು. ಈ ಸಮಾರಂಭವು ಬಾಹ್ಯಾಕಾಶ ಅನ್ವಯಿಕೆಗಳ ಕೇಂದ್ರ ಇಸ್ರೋ ಸಹಭಾಗಿತ್ವದೊಂದಿಗೆ ನಡೆದಿತ್ತು ಎಂದು ತಿಳಿಸಿದರು.
ತಂಡದ ಏಳು ಸದಸ್ಯರಾದ ಜಯೇಶ್ ಪಾಟೀಲ್, ಸಕ್ಷಮ್ ಗುಪ್ತಾ, ಅಸ್ವಿನ್ ಜೋಸೆಫ್, ಪ್ರಿಯಾಂಶು ಮಿತ್ತಲ್, ರಸ್ಕಿನ್ ವರ್ಮಾ, ಅಂಕಿತ್ ದಾಶ್ ಮತ್ತು ಮೊಹಮ್ಮದ್ ರೆಹಾನ್ ಈ ಯೋಜನೆಯು ವಿದ್ಯಾರ್ಥಿಗಳಿಗೆ ಹಾರ್ಡ್‍ವೇರ್ ಸಂಯೋಜನೆ, ಸಾಫ್ಟ್ವೇರ್ ಅಭಿವೃದ್ಧಿ, ಸ್ವಯಂಚಾಲಿತ ಸಂಚಲನ, ಕಂಪ್ಯೂಟರ್ ವಿಷನ್, ಪರೀಕ್ಷೆ ಮತ್ತು ನೈಜ ಪರಿಸರದಲ್ಲಿ ತಂತ್ರಜ್ಞಾನಗಳ ಅನುಷ್ಠಾನದಲ್ಲಿ ಅಮೂಲ್ಯ ಪ್ರಾಯೋಗಿಕ ಅನುಭವವನ್ನು ಒದಗಿಸಿದೆ ಎಂದು ತಿಳಿಸಿದರು.
ಈ ಸಾಧನೆಯು ವಿದ್ಯಾರ್ಥಿಗಳ ತಾಂತ್ರಿಕ ಪರಿಣತಿ, ಪರಿಶ್ರಮ, ತಂಡದ ಸಹಕಾರ ಮತ್ತು ನಾವೀನ್ಯತೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ, ಸ್ವಯಂಚಾಲಿತ ರೋಬೋಟಿಕ್ಸ್, ವೈಮಾನಿಕ ವ್ಯವಸ್ಥೆಗಳು ಮತ್ತು ಭವಿಷ್ಯದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಐಐಐಟಿ ಧಾರವಾಡದ ವಿದ್ಯಾರ್ಥಿಗಳ ಸಾಮಥ್ರ್ಯವನ್ನು ತೋರಿಸುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಐಐಐಟಿ ಧಾರವಾಡದ ನಿರ್ದೇಶಕರಾದ ಪ್ರೊ. ಎಸ್. ಆರ್. ಮಹದೇವ ಪ್ರಸನ್ನ, ವಿದ್ಯಾರ್ಥಿ ಕಲ್ಯಾಣ ಉಸ್ತುವಾರಿ ಪ್ರೊಫೆಸರ್. ಕೆ. ಗೋಪಿನಾಥ್, ರಿಜಿಸ್ಟರ್ ಸತೀಶ ಅಣ್ಣಿಗೇರಿ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.