ಸಂಗಮೇಶ ಎನ್ ಜವಾದಿ,
ಪರಿಸರವಾದಿ, ಬರಹಗಾರರು, ಬೀದರ
ಬೇಸಿಗೆಗಾಲ ಬಂತೆಂದರೆ ಮೂಕಪ್ರಾಣಿಗಳು ನೀರಿಗಾಗಿ ಪರದಾಡುತ್ತವೆ. ಕುಡಿವ ನೀರಿಗೆ ಹಾಹಾಕಾರ ಸೃಷ್ಟಿಯಾಗಿ ಪ್ರಾಣಿ, ಹಕ್ಕಿ ಪಕ್ಷಿಗಳು ತೊಂದರೆ ಎದುರಿಸುವುದು ಸಹಜವಾಗಿದೆ. ಜನ ಬಾಯಾರಿದರೆ ಕುಡಿವ ನೀರು ಖರೀದಿಸಿ ನೀರಿನ ದಾಹ ನೀಗಿಸಿಕೊಳ್ಳುತ್ತಾರೆ. ಆದರೆ, ಮೂಕ ಪ್ರಾಣಿಗಳ ರೋಧನೆ ಹೇಳತೀರದು. ಬೇಸಿಗೆಯ ತೀವ್ರ ಬಿಸಿಲು ಪ್ರಾಣಿ-ಪಕ್ಷಿಗಳಿಗೆ, ವಿಶೇಷವಾಗಿ ಮೂಕಜೀವಿಗಳಿಗೆ ದೊಡ್ಡ ಹೊಡೆತವನ್ನು ನೀಡುತ್ತದೆ. ಅತಿಯಾದ ತಾಪಮಾನದಿಂದಾಗಿ ಅವುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.ಬಿಸಿಲಿನ ಝಳಕ್ಕೆ ಪಕ್ಷಿ ,ಪ್ರಾಣಿಗಳು ಸೊರಗುತ್ತವೆ ಮತ್ತು ಅತಿಯಾದ ಬಿಸಿಲಿನಿಂದ ಸಾಕು ಪ್ರಾಣಿಗಳಿಗೆ ಅಪಾಯಕಾರಿ.ಬಿಸಿಲಿನಿಂದಾಗಿ ಪಕ್ಷಿ, ಪ್ರಾಣಿಗಳು ಆಹಾರ ಸೇವನೆಯನ್ನು ಕಡಿಮೆ ಮಾಡುತ್ತವೆ.ಕಾಡಿನಲ್ಲಿ ನೀರಿನ ಅಭಾವದಿಂದ ಸಹಜವಾಗಿಯೇ ಪಕ್ಷಿ,ಪ್ರಾಣಿಗಳು ನೀರು ಹುಡುಕುತ್ತಾ ಜನವಸತಿ ಪ್ರದೇಶಗಳಿಗೆ ಬರುತ್ತವೆ. ಮನುಷ್ಯ ತನ್ನ ಅನುಕೂಲಕ್ಕೆ ಬೇಕಾದಂತೆ ಸಂಪನ್ಮೂಲವನ್ನು ಬಳಸಿಕೊಂಡು ನೆಮ್ಮದಿಯಾಗಿ ಇರುವಂತ ಪ್ರಯತ್ನ ಮಾಡುತ್ತಾನೆ. ವಿಶೇಷವಾಗಿ ಹೇಳಬೇಕೆಂದರೆ ಈಗಿನ 40 -44 ಡಿಗ್ರಿ ಬಿಸಿಲನ್ನು ತಡೆಯಲು ಫ್ಯಾನ್, AC, ಫ್ರಿಜ್ ನೀರು ಅಂತ ಬಳಸಿಕೊಂಡು ಆರಾಮವಾಗಿರುತ್ತೇವೆ. ಆದರೆ ಪ್ರಾಣಿ , ಪಕ್ಷಿಗಳಿಗೆ ಯಾರು ನೀರು ಕೊಡುತ್ತಾರೆ? ಖಂಡಿತವಾಗಿಯೂ ಯಾರೂ ಕೊಡುವುದಿಲ್ಲ. ಅದಕ್ಕಾಗಿಯೇ ಅವುಗಳು ಒಂದು ತೊಟ್ಟು ನೀರಿಗೆ ಪರದಾಡುತ್ತಿವೆ. ಆಹಾರ, ನೀರು ಸಿಗದೆ ನೂರಾರು ಪ್ರಾಣಿ, ಪಕ್ಷಿಗಳು ಸಾಯುತ್ತಿವೆ. ಈ ನಿಟ್ಟಿನಲ್ಲಿ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾವೆಲ್ಲರೂ ಮಾಡಬಹುದು ಎಂದರೆ, ಸಹಜವಾಗಿಯೇ ಬೇಸಿಗೆ ಕಾಲದಲ್ಲಿ ನೀರಿಗಾಗಿ ಪ್ರಾಣಿ, ಪಕ್ಷಿಗಳು ಬಹಳಷ್ಟು ಪರದಾಡಿ ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು, ಮಾನವೀಯತೆ ದೃಷ್ಟಿಯಿಂದ ನಾವೆಲ್ಲರೂ ಪ್ರಾಣಿ,ಪಕ್ಷಿಗಳಿಗೆ ಮಣ್ಣಿನ ಪಾತ್ರೆಗಳಲ್ಲಿ ನೀರು ಇಡುವ ಕೆಲಸ ಖಂಡಿತವಾಗಿಯೂ ಮಾಡಲೇಬೇಕು.
ಪ್ರತಿಯೊಬ್ಬರ ಮನೆ ಮುಂದೆ, ಕಿಟಕಿ ಬಳಿ, ಬಾಲ್ಕನಿಯಲ್ಲಿ ಒಂದು ಮಣ್ಣಿನ ಮಡಿಕೆ ಅಥವಾ ಅಗಲ ಬೌಲ್ ನಲ್ಲಿ ನೀರು ಇಡಿ. ಪ್ಲಾಸ್ಟಿಕ್ ಬೇಡ, ಮಣ್ಣಿನ ಮಡಿಕೆ ಇದ್ದರೆ ಅದು ತಂಪಾಗಿರುತ್ತೆ. ಇಲ್ಲವೆ ಮನೆಯ ಹಿತ್ತಲುಗಳಲ್ಲಿ ಇರುವ ಗಿಡ, ಮರಗಳಲ್ಲಿ ನೀರಿನ ತೊಟ್ಟೆ ಇಟ್ಟು ನೀರು ಧಾನ್ಯ ಹಾಕಬೇಕು. ಜೊತೆಗೆ ದಿನಾಲೂ ನೀರು ಬದಲಿಸಿ, ನಿಂತ ನೀರಲ್ಲಿ ಸೊಳ್ಳೆ ಆಗುತ್ತೆ. ಬೆಳಗ್ಗೆ-ಸಂಜೆ ಶುದ್ಧ ನೀರು ಹಾಕಿ. ಕುಡಿಯುವ ನೀರೇ ಇದ್ದರೆ ಸಾಕು. ಸಾಧ್ಯವಾದಷ್ಟು ನೆರಳಿನಲ್ಲಿ ಇಡಿ. ಬಿಸಿಲಲ್ಲಿ ಇಟ್ಟರೆ ನೀರು ಕುದಿಯುತ್ತೆ. ಮರದ ಕೆಳಗೆ, ಚಪ್ಪರದ ಕೆಳಗೆ ಇಡಿ. ಇನ್ನು ನೀರಿನ ಜೊತೆ ಸ್ವಲ್ಪ ಅಕ್ಕಿ, ಜೋಳ, ರಾಗಿ ಹಾಕಿದರೆ ಉತ್ತಮ. ಕೆರೆ, ಹಳ್ಳ ಕೊಳ್ಳಗಳು ಬತ್ತುವುದರಿಂದ ಪಕ್ಷಿಗಳು ನೀರು ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಬರುತ್ತವೆ. ಅದಕ್ಕೆ ನಾವು ಇಟ್ಟ ನೀರಿನಿಂದ ಪಕ್ಷಿಗಳ ಜೀವ ಉಳಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಪ್ರಾಣಿ, ಪಕ್ಷಿಗಳ ಉಳಿವಿಗೆ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದಂತಾಗುತ್ತದೆ. ಕಾರಣ ಬೇಸಿಗೆಯಲ್ಲಿ ಮಧ್ಯಾಹ್ನ ಹೊರಗೆ ಬರಲಾರದಷ್ಟು ಬಿಸಿಲು ಪ್ರಖರವಾಗಿರುತ್ತದೆ. ನಮ್ಮ ನಮ್ಮ ಮನೆಗಳ ಮೇಲೆ, ಕಾಂಪೌಂಡ್ ಗಳ ಮೇಲೆ ಮಣ್ಣಿನ ಪಾತ್ರೆಗಳಲ್ಲಿ ನೀರು ತುಂಬಿಡುವ ಕೆಲಸ ಮಾಡೋಣ. ನಮಗೆ ಪ್ರಾಣಿ, ಪಕ್ಷಿಗಳ ಮೇಲೆ ಒಂದಿಷ್ಟು ಪ್ರೀತಿ ಇರಲಿ, ಅವಕಾಶ ಇದ್ದ ಕಡೆ ನೀರಿನ ತೊಟ್ಟಿ ಇಟ್ಟು, ನೀರನ್ನು ತುಂಬಿಸಿದ್ದೇ ಆದರೆ ಅದೊಂದು ಮಾದರಿ ಕೆಲಸವಾಗುತ್ತದೆ.
ಒಂದು ಮಡಿಕೆ ನೀರು = ಸಾವಿರ ಪುಣ್ಯಕ್ಕೆ ಸಮಾನ:
ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವಿಶ್ವ ಗುರು ಬಸವಣ್ಣನವರು ಹೇಳಿದಂತೆ – "ದಯವೇ ಧರ್ಮದ ಮೂಲವಯ್ಯಾ".ದಯೆ ಮನುಷ್ಯನಿಗೆ ಮಾತ್ರ ಅಲ್ಲ, ಮೂಕ ಪ್ರಾಣಿ-ಪಕ್ಷಿಗಳಿಗೂ ತೋರಿಸಬೇಕು.
ಪ್ರತಿ ಮನೆಯ ಮಡಿಕೆಯಲ್ಲಿ ನೀರು ಕುಡಿದ ಗುಬ್ಬಿ, ನಿಮ್ಮ ಹೊಲದ ಕೀಟ ತಿಂದು ಬೆಳೆ ಉಳಿಸುತ್ತೆ.
ನೀರು ಕುಡಿದ ಕಾಗೆ, ಮುಂದಿನ ಮಳೆಗಾಲಕ್ಕೆ ಬೀಜ ಹೊತ್ತು ತಂದು ಕಾಡು ಬೆಳೆಸುತ್ತೆ. ಪ್ರಾಣಿಗಳು ನಮಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತವೆ ಎನ್ನುವುದು ನಾವ್ಯಾರೂ ಮರೆಯಬಾರದು.
ಜೀವ ಉಳಿಸೋಣ: ಪರಿಸರದ ಸರಪಳಿ ಕೊಂಡಿ ಕಳಚಿದರೆ, ಮನುಷ್ಯರಿಗೆ ಖಂಡಿತವಾಗಿಯೂ ಉಳಿಗಾಲವಿಲ್ಲ. ಪ್ರಾಣಿ, ಪಕ್ಷಿ ಇಲ್ಲದಿದ್ದರೆ ಕೀಟ ಜಾಸ್ತಿ, ಬೆಳೆ ನಾಶ, ಬರಗಾಲ ಫಿಕ್ಸ್. ಅದಕ್ಕಾಗಿಯೇ ನೂರಾರು ಜೀವ ರಾಶಿಗಳನ್ನು ಉಳಿಸುವ ಕಾರ್ಯಕ್ಕೆ ಕೈ ಜೋಡಿಸೋಣ. ಈ ಬೇಸಿಗೆ, ಪ್ರಾಣಿ - ಪಕ್ಷಿಗಳ ಪಾಲಿನ ಭಗೀರಥ ನೀವಾಗಿರಿ. ಮನೆ ಮುಂದೆ ಮಡಿಕೆಯಲ್ಲಿ ಪಕ್ಷಿಗಳಿಗೆ ಹಾಗೂ ಪ್ರಾಣಿಗಳಿಗೆ ಕುಡಿಯಲು ನೀರು ಹಾಕಿ, ಪ್ರಾಣಿ, ಪಕ್ಷಿಗಳ ಸಂಕುಲ ಉಳಿಸಿ. ಪುಣ್ಯ ಕಟ್ಟಿಕೊಳ್ಳಿ.
ಆಶಯ ಮಾತು: ನೀರು ಬೇಸಿಗೆಯಲ್ಲಿ ಜನರಿಗೆ ಸಿಗುವಷ್ಟು ಸುಲಭವಾಗಿ ಹಕ್ಕಿ, ಪಕ್ಷಿಗಳಿಗೆ ಇಂದಿನ ಕಾಂಕ್ರಿಟ್ ಕಾಡಿನಲ್ಲಿ ನೀರು ಸಿಗಲಾರದೆ ದಾಹ ನೀಗಿಸಿಕೊಳ್ಳಲು ಪ್ರಾಣಿ ಪಕ್ಷಿಗಳು ಅಲೆದಾಡುತ್ತಿವೆ. ಕೆಲ ಸಲ ನೀರಿನ ಅಭಾವದಿಂದ ಪ್ರಾಣ ಕಳೆದುಕೊಂಡ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಸರಕಾರ ಮತ್ತು ಸ್ಥಳೀಯ ಆಡಳಿತಗಳು ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು, ಕಾಳು ಪೂರೈಸಲು ಕ್ರಮಕೈಗೊಳ್ಳಬೇಕಿದೆ. ಈ ದಿಸೆಯಲ್ಲಿ ರಣ ಬೇಸಿಗೆಯ ಈ ದಿನಗಳಲ್ಲಿ ಬಿಸಿಲಿನ ಝಳದಿಂದ ತತ್ತರಿಸಿದ ಪಕ್ಷಿಗಳು ಹಾಗೂ ಜಾನುವಾರುಗಳಿಗೆ ನೀರು, ಕಾಳು, ಆಹಾರದ ವ್ಯವಸ್ಥೆಯನ್ನು ಒದಗಿಸಿ ಮಾನವೀಯತೆ ಮೆರೆಯಬೇಕಾಗಿದ್ದು ಮನುಷ್ಯರಾದ ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ.