"ಪುಸ್ತಕದಷ್ಟು ನಿಷ್ಠಾವಂತ ಸ್ನೇಹಿತ ಇನ್ನೊಂದಿಲ್ಲ"(There is no friend as loyal as a book)ಎಂಬ ಅರ್ನೆಸ್ಟ್ ಹೆಮಿಂಗ್ವೇ ಅವರ ಮಾತು ನೂರಕ್ಕೆ ನೂರು ಸತ್ಯ. ಪುಸ್ತಕಗಳು ಮನುಷ್ಯನ ಅತ್ಯುತ್ತಮ ಒಡನಾಡಿಗಳಾಗಿದ್ದು, ಅನೇಕ ಕಾರಣಗಳಿಗಾಗಿ ಅವುಗಳನ್ನು ನಂಬಲರ್ಹ ಸ್ನೇಹಿತರಿಗೆ ಹೋಲಿಸಲಾಗುತ್ತದೆ.
ಪುಸ್ತಕಗಳು ಅತ್ಯಂತ ವಿಶ್ವಾಸಾರ್ಹ,ಓದುಗರನ್ನು ಎಂದಿಗೂ ಕೈಬಿಡದ ಅಥವಾ ದ್ರೋಹ ಮಾಡದ ಸಾಧನಗಳಾಗಿವೆ.
ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನಗಳು, ಟ್ಯಾಬ್ಲೆಟ್‌ಗಳು ಮತ್ತು ಕಂಪ್ಯೂಟರ್‌ಗಳು ತುಂಬಾ ಪ್ರಯೋಜನಕಾರಿ ಸಾಧನಗಳೇ ಸರಿ. ಆದರೆ ಅವುಗಳ ಅತಿಯಾದ ಬಳಕೆಯಿಂದ ಕೆಲಸ, ಮಕ್ಕಳ ಶಿಕ್ಷಣ ಮತ್ತು ಸಂಬಂಧಗಳಲ್ಲಿ ತೊಂದರೆಗಳು ಎದುರಾಗುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮತ್ತು ಸರ್ಕಾರದ ವಿವಿಧ ಇಲಾಖೆಗಳಿಂದ ನಡೆಯುತ್ತಿರುವ ವಸತಿ ಶಾಲೆ, ನಿಲಯಗಳು ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪ್ರತಿ ನಿತ್ಯವೂ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನಾ ಸಮಯದ ನಂತರ ಮಕ್ಕಳಿಂದ ಹತ್ತು ನಿಮಿಷಗಳ ಕಾಲ ಕಡ್ಡಾಯವಾಗಿ "ಕನ್ನಡ ದಿನಪತ್ರಿಕೆ" ಓದುವ ಅಭ್ಯಾಸವನ್ನು ಅನುಷ್ಠಾನಗೊಳಿಸುವಂತೆ ಈ ಮೂಲಕ ಇದೇ ಎಪ್ರೀಲ್ 15 ರಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕರ್ನಾಟಕದ ಶಾಲೆಗಳಲ್ಲಿ ಮೊಬೈಲ್ ವ್ಯಸನ ಕಡಿಮೆ ಮಾಡಲು ಮತ್ತು ಜ್ಞಾನಾರ್ಜನೆ ಹೆಚ್ಚಿಸಲು, ಬೆಳಗಿನ ಪ್ರಾರ್ಥನೆಯ ನಂತರ ಪ್ರತಿದಿನ 10 ನಿಮಿಷಗಳ ಕಾಲ ಕನ್ನಡ ದಿನಪತ್ರಿಕೆ ಓದುವುದನ್ನು ಎಲ್ಲಾ ಶಾಲೆಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಈ ಕ್ರಮವು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ, ಸಾಮಾನ್ಯ ಜ್ಞಾನ, ಭಾಷಾ ಕೌಶಲ್ಯ, ಡಿಜಿಟಲ್ ಚಟದಿಂದ ದೂರವಿಡಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಹೇಳಬಹುದು.
ಹಿನ್ನೆಲೆ ಏನು..?
ಇತ್ತೀಚೆಗೆ ರಾಜ್ಯ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆಯನ್ನು ನಿರ್ಬಂಧಿಸುವ ಕುರಿತು ಚರ್ಚಿಸುತ್ತಿದ್ದು, ಅದರ ಭಾಗವಾಗಿಯೇ ಮಕ್ಕಳನ್ನು ಮತ್ತೆ ಓದಿನತ್ತ ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ.ಜೊತೆಗೆ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರುರವರು ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಶಾ.ಶಿ.ಇ. ಬೆಂಗಳೂರುರವರಲ್ಲಿ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಈ ಸಂಬಂಧವಾಗಿ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಪತ್ರದಲ್ಲಿನ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶನವಿರುವುದರಿಂದ ಮಕ್ಕಳ ಪಾಲಕರಿಗೆ ಹರ್ಷವುಂಟು ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು.
ಆದೇಶದಲ್ಲೇನಿದೆ...?
ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಇಂಟರ್ ನೆಟ್ ಶಿಕ್ಷಣ, ಮನರಂಜನೆ ಮತ್ತು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಿನ ಸಮಯಾವಕಾಶ ನೀಡುತ್ತಿದ್ದಾರೆ ಮತ್ತು ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿಯ ಕೊರತೆ, ಶ್ರವಣದೋಷ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲದೇ ಇರುವಂತಹ ಲಕ್ಷಣಗಳು ಕಂಡು ಬರುತ್ತಿವೆ. ಆದ್ದರಿಂದ ಮಕ್ಕಳು ಶಾಲೆಗಳಲ್ಲಿ ದಿನ ನಿತ್ಯವೂ ಕನಿಷ್ಠ 10 ರಿಂದ 15 ನಿಮಿಷ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಸಿದ್ಧತೆ, ಪ್ರಚಲಿತ ವಿದ್ಯಮಾನಗಳ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಲು ಶಬ್ದಕೋಶ, ಭಾಷಾ ಶೈಲಿ ಮತ್ತು ಬರವಣಿಗೆಯ ಕೌಶಲ್ಯಗಳನ್ನು ಸುಧಾರಿಸಲು ಇದು ಸಹಕಾರಿಯಾಗುತ್ತದೆಂದು ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರುರವರು ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಶಾ.ಶಿ.ಇ. ಬೆಂಗಳೂರುರವರಲ್ಲಿ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಈ ಸಂಬಂಧವಾಗಿ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಪತ್ರದಲ್ಲಿನ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶನವಿರುತ್ತದೆ.
ಉದ್ದೇಶ:
ಇಡೀ ಜಗತ್ತು ಈಗ ಡಿಜಿಟಲ್ ಯುಗದಲ್ಲಿ ಮುಳುಗಿದೆ.ಇಲ್ಲಿ ಮಕ್ಕಳು ಮೊಬೈಲ್ ಫೋನ್, ಸೋಶಿಯಲ್ ಮೀಡಿಯಾ ಮತ್ತು ಇಂಟರ್ನೆಟ್ ವ್ಯಸನಕ್ಕೆ ತುತ್ತಾಗುತ್ತಿರುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶ.
ಪ್ರಯೋಜನಗಳು:
>ಪುಸ್ತಕಗಳು ನಮ್ಮನ್ನು ಜ್ಞಾನದ ಲೋಕಕ್ಕೆ ಕೊಂಡೊಯ್ಯುತ್ತವೆ ಮತ್ತು ನಮ್ಮ ಬದುಕನ್ನು ರೂಪಿಸುತ್ತವೆ ಹಾಗಾಗಿ ನಿರಂತರ ಜ್ಞಾನದ ಬಂಡಾರವೆನ್ನಬಹುದು.
>ಏಕಾಂತದ ಒಡನಾಡಿ: ನಮಗೆ ಯಾರೂ ಇಲ್ಲದ ಸಮಯದಲ್ಲಿ, ಪುಸ್ತಕಗಳು ನಮ್ಮ ಏಕಾಂತವನ್ನು ನೀಗಿಸಿ, ಮನಸ್ಸಿಗೆ ನೆಮ್ಮದಿ ನೀಡುತ್ತವೆ.
>ನಿಷ್ಠಾವಂತ ಮಾರ್ಗದರ್ಶಿ: ಮಾನವ ಸ್ನೇಹಿತರು ಬದಲಾಗಬಹುದು, ಆದರೆ ಪುಸ್ತಕಗಳು ನಮಗೆ ಬೇಕಾದಾಗ, ಬೇಕಾದ ಜ್ಞಾನವನ್ನು ನೀಡಲು ಯಾವಾಗಲೂ ಸಿದ್ಧವಿರುತ್ತವೆ.
>ಅಂತರಂಗದ ಕನ್ನಡಿ: ಪುಸ್ತಕಗಳಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ ಮತ್ತು ನಮ್ಮನ್ನು ನಾವು ಕಂಡುಕೊಳ್ಳುತ್ತೇವೆ.
ಒಟ್ಟಾರೆಯಾಗಿ, ಪುಸ್ತಕಗಳು ನಮ್ಮ ಜೀವನದ ನಿಜವಾದ ಸ್ನೇಹಿತರಾಗಿದ್ದು, ಅವುಗಳನ್ನು ಓದುವುದು ನಮ್ಮ ದೃಷ್ಟಿಕೋನವನ್ನು ವಿಸ್ತರಿಸುತ್ತದೆ.ಇಂದಿನ ಡಿಜಿಟಲ್ ಯುಗದಲ್ಲಿ, ಮೊಬೈಲ್ ಮತ್ತು ಅಂತರ್ಜಾಲದ ಬಳಕೆಯ ನಡುವೆಯೂ, ಓದುವ ಹವ್ಯಾಸವನ್ನು ಉಳಿಸಿಕೊಳ್ಳುವುದು,ಬೆಳೆಸಿಕೊಳ್ಳುವುದು ಮತ್ತು ಡಿಜಿಟಲ್ ಚಟದಿಂದ ದೂರವಿಡಲು
ಅತ್ಯಂತ ಮುಖ್ಯವಾಗಿದೆ.
ಯಾರು ಏನೇ ಹೇಳಿದರೂ ಮೊದಲು ಮಕ್ಕಳ ಪಾಲಕರು ಮಕ್ಕಳಿಗೆ ಮೊಬೈಲ್ ಫೋನ್ ಕೊಡದೇ ಇರುವ ಮನಸ್ಸು ಮಾಡಿದರೆ ಮಾತ್ರ ಈ ಮೊಬೈಲ್ ಫೋನ್ ಖಯಾಲಿಯ ವ್ಯಸನ ತಪ್ಪಿಸಲು ಸಾಧ್ಯ.. ಏನಂತೀರಿ.
ಲೇಖನ:
ಬಸವರಾಜ ಎಮ್ ಯರಗುಪ್ಪಿ
ಶಿಕ್ಷಕರು ಹಾಗೂ ಹವ್ಯಾಸಿ ಬರಹಗಾರರು