ಕಾಗವಾಡ: ಉತ್ತಮ ಆರೋಗ್ಯಕ್ಕೆ ಉತ್ತಮ ಪೋಷಣೆಯೇ ಅಡಿಪಾಯವಾಗಿದ್ದು, ಗರ್ಭಿಣಿಯರು ಸೇವಿಸುವ ಪೌಷ್ಟಿಕ ಆಹಾರದಿಂದ ಮಕ್ಕಳು ಆರೋಗ್ಯವಂತರಾಗಿ ಬಾಳಿ ಬದುಕುತ್ತಾರೆ. ಪೋಷಣಯುಕ್ತ ಆಹಾರವು ಮನುಷ್ಯನ ಆರೋಗ್ಯ, ಬೆಳವಣಿಗೆ, ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ನಿರ್ಧರಿಸುತ್ತದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ಸರ್ಕಾರ ನೀಡುವ ಪೌಷ್ಟಿಕ ಆಹಾರದ ಲಾಭ ಪಡೆದುಕೊಳ್ಳಬೇಕೆಂದು ನ್ಯಾಯಾಧೀಶೆ ರೂಪಾ ಚಿನಿವರ ತಿಳಿಸಿದ್ದಾರೆ.
ಅವರು, ಬುಧವಾರ ದಿ. 09 ರಂದು ತಾಲೂಕಿನ ಮಂಗಸೂಳಿ ಗ್ರಾಮದ ತುಕಾರಾಮ ಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ತಾಲೂಕಾ ಪಂಚಾಯತ, ಪೋಲಿಸ್ ಇಲಾಖೆ, ಮತ್ತು ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರದಲ್ಲಿ ವಿಶ್ವ ಪೌಷ್ಟಿಕಾಂಶ ದಿನದ ನಿಮಿತ್ಯ ಪೋಷಣಾ ಅಭಿಯಾನ, ಗರ್ಭಿಣಿ ಮಹಿಳೆಯರ ಸೀಮಂತ, ಮಕ್ಕಳಿಗೆ ಪೋಷಣೆಯುಕ್ತ ಆಹಾರ ನೀಡುವ ಜೊತೆಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಚಾಲನೆ ನೀಡಿ ಮಾತನಾಡುತ್ತಿದ್ದರು.
ಸಿಡಿಪಿಓ ಸಂಜೀವಕುಮಾರ ಸದಲಗೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು, ಆರೋಗ್ಯವಂತರನ್ನಾಗಿ ರೂಪಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು ಪ್ರತಿವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಪೋಷಣ ಅಭಿಯಾನವನ್ನು ಆಚರಿಸಲಾಗುತ್ತದೆ. ಆರೋಗ್ಯವಂತ ಸಮಾಜ ರೂಪಿಸುವಲ್ಲಿ ಸರ್ಕಾರ ಕೈಗೊಂಡಿರುವ ವಿಶೇಷ ಕಾರ್ಯಕ್ರಮಕ್ಕೆ ನಾವೆಲ್ಲರೂ ಕೈಜೋಡಿಸೋಣವೆಂದರು.
ವೈದ್ಯಾಧಿಕಾರಿ ಡಾ. ಶಿವಕುಮಾರ ಕುರಬೇಟ ಮಾತನಾಡಿ, ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಸೇವನೆಯ ಕುರಿತು ಮಾಹಿತಿ, ನೀಡಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಆರ್. ರಾವ ಮಾತನಾಡಿ, ಮಕ್ಕಳ ಉಜ್ಚಲ ಭವಿಷ್ಯಕ್ಕಾಗಿ ಮಾತೆಯರು ಪೌಷ್ಟಿಕ ಆಹಾರ ಸೇವನೆಯೊಂದಿಗೆ ಮಕ್ಕಳನ್ನು ಮೊಬೈಲ್‌ಗಳಿಂದ ದೂರವಿಡುವಂತೆ ತಿಳಿಸಿದರು.
ಈ ವೇಳೆ ಉಪತಹಶೀಲ್ದಾರ ಅಣ್ಣಾಸಾಬ ಕೋರೆ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್.ಬಿ. ನಾದ್ರೆ, ವಕೀಲರಾದ ಇ.ಎಸ್. ವರ್ಧನ, ಆರ್.ಎ. ಭಂಡಾರೆ, ಎಎಸ್‌ಐ ಐ.ಕೆ. ಕಾಜಿ, ಪಿಡಿಓ ಸಂಜಯ ಸೂರ್ಯವಂಶಿ, ಗ್ರಾಮ ಆಡಳಿತಾಧಿಕಾರಿ ಎಸ್.ಎಂ. ಕಿಲಾರಿ ಸೇರಿದಂತೆ ಮಹಿಳೆಯರು, ಅಂಗವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.