ಬಳ್ಳಾರಿ. ಆ. 20 : ಭೂ ರಹಿತ ಕೃಷಿ ಕಾರ್ಮಿಕರು ಮತ್ತು ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ರಸಗೊಬ್ಬರ, ಬೆಳೆ ಪರಿಹಾರ, ಸಾಲಮನ್ನಾ, ಬೆಂಬಲ ಬೆಲೆ ಹಾಗೂ ಸಾಗುವಳಿ ರೈತರಿಗೆ ಹಕ್ಕುಪತ್ರ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದೆ. ಇದೇ ಹಿನ್ನೆಲೆಯಲ್ಲಿ ಭೂಹೀನ ಹಾಗೂ ಬಡ ರೈತರಿಗೆ ಭೂಮಿ ಮತ್ತು ಹಕ್ಕುಪತ್ರವನ್ನು ಕಂದಾಯ ಇಲಾಖೆ ತಕ್ಷಣಕ್ಕೆ ಒದಗಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್ ಶಿವಕುಮಾರ್ ಆಗ್ರಹಿಸಿದರು.
ಅವರು ಸಿರುಗುಪ್ಪ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗೈಯ್ಯಾಳು ಪಟ್ಟಾದಾರರ ಹೆಸರಿನಲ್ಲಿರುವ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ಭೂರಹಿತ ಕೃಷಿ ಕಾರ್ಮಿಕರಿಗೆ ಮತ್ತು ರೈತರಿಗೆ ಹಕ್ಕುಪತ್ರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಗಲು-ರಾತ್ರಿ ಧರಣಿ ಸತ್ಯಾಗ್ರಹ ಭಾಗವಹಿಸಿ ಅವರು ಮಾತನಾಡಿ,
ಸಿರುಗುಪ್ಪ ತಾಲೂಕಿನ ಹಳೇಕೋಟೆ, ದೇವಲಾಪುರ ಹಾಗೂ ಸಿರಿಗೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜಮೀನುಗಳ ದಾಖಲೆಗಳಿಗೆ ಸಂಬಂಧಿಸಿದಂತೆ ಅಕ್ರಮಗಳು ನಡೆದಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೆಲ ಜಮೀನುಗಳನ್ನು ಮೂಲ ಪಟ್ಟಾದಾರರ ಅನುಪಸ್ಥಿತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸಂಬಂಧಿಕರು ಹಾಗೂ ಇತರರ ಹೆಸರಿಗೆ ನೋಂದಣಿ ಮಾಡಲಾಗಿದೆ. ಈ ಮೂಲಕ 300 ಎಕರೆಗೂ ಹೆಚ್ಚು ಜಮೀನುಗಳ ವಹಿವಾಟು ನಡೆದಿರುವ ಬಗ್ಗೆ ತನಿಖೆ ನಡೆಸಬೇಕು ಎಂದ ಅವರು, ಜಮೀನುಗಳ ನೋಂದಣಿ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು. ಅಕ್ರಮ ನೋಂದಣಿಗೆ ಕಾರಣರಾದ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದ ಶಿವಶಂಕರ್ ರೈತರ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆರೋಪಿಸಿದ ಅವರು, ರೈತರ ಮೇಲಿನ ಪ್ರಕರಣಗಳನ್ನು ರದ್ದುಪಡಿಸಬೇಕೆಂದರು.
ಪ್ರಮುಖ ಬೇಡಿಕೆಗಳು:
ಸಿರುಗುಪ್ಪ ಉಪ ನೋಂದಣಿ ಕಚೇರಿಯ ಅಧಿಕಾರಿಯ ವಿರುದ್ಧ ತನಿಖೆ ನಡೆಸಿ, ತಪ್ಪಿತಸ್ಥರೆಂದು ಸಾಬೀತಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು.
ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 74/2026 ಪ್ರಕರಣವನ್ನು ರದ್ದುಪಡಿಸಬೇಕು.
ಗೈರು ಪಟ್ಟಾದಾರರ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ಅರ್ಹ ರೈತರಿಗೆ ಹಕ್ಕುಪತ್ರ ನೀಡಬೇಕು.
ಸರ್ಕಾರ ಕೂಡಲೇ ಫಾರಂ-1 ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು.
ಜಮೀನುಗಳ ಅಕ್ರಮ ನೋಂದಣಿ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಧರಣಿಯಲ್ಲಿ ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಗಾಳಿ ಬಸವರಾಜ್, ಜಿಲ್ಲಾ ಉಪಾಧ್ಯಕ್ಷರಾದ ವಿ.ಎಸ್. ಶಿವಶಂಕರ, ವಿ. ಮಾರುತಿ, ಜೆ.ಎಂ. ಚನ್ನಬಸಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಖಲಂದರ್ ಭಾಷ, ಜಿಲ್ಲಾ ಸಹ ಕಾರ್ಯದರ್ಶಿ ಜಿ. ಪಂಪನಗೌಡ, ದುರುಗಪ್ಪ ಸೇರಿದಂತೆ ಜಿಲ್ಲಾ ಸಮಿತಿ ಸದಸ್ಯರು ಹಾಗೂ ರೈತರು ಭಾಗವಹಿಸಿದ್ದರು.
ಧರಣಿಗೆ DYFI, CITU, ಕರ್ನಾಟಕ ರಾಜ್ಯ ವಿಮುಕ್ತಿ ದೇವದಾಸಿ ಮಹಿಳಾ ಸಂಘಟನೆ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘಟನೆ, ಬಿಸಿಯೂಟ ನೌಕರರ ಸಂಘಟನೆ, ಅಂಗನವಾಡಿ ಕಾರ್ಯಕರ್ತರ ಸಂಘಟನೆ ಹಾಗೂ ಮಾನವ ಬಂಧುತ್ವ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಈ ಧರಣಿಗೆ ಬೆಂಬಲ ವ್ಯಕ್ತಪಡಿಸಿದವು.
ಬೇಡಿಕೆಗಳು ಈಡೇರುವವರೆಗೆ ಹಗಲು-ರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿಸುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ತಿಳಿಸಿದರು.
ಈ ಧರಣಿಯಲ್ಲಿ ಹಲವಾರು ಸಂಘಟನೆಗಳ ಪದಾಧಿಕಾರಿಗಳು ಮುಖಂಡರು ಮತ್ತು ಕೃಷಿ ಕಾರ್ಮಿಕರು ರೈತನ ನಾಯಕರು ಭಾಗವಹಿಸಿದ್ದರು.