ಮೂಡಲಗಿ : ಮಣ್ಣಿನ ಗಣಪತಿ ಕೂಡಿಸುವುದರೊಂದಿಗೆ ಪರಿಸರ ಸ್ನೇಹಿ ಗಣೇಶ ಹಬ್ಬದ ಆಚರಣೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾ ಶಾಂತಿ ಹಾಗೂ ಸೌಹಾರ್ದತೆಯಿಂದ ಹಬ್ಬ ಆಚರಿಸಿ ಎಂದು ಸಿಪಿಐ ಶ್ರೀಶೈಲ ಬ್ಯಾಕೋಡ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಜರುಗಿದ ಗಣೇಶ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಗಣಪತಿ ಮಂಡಳಿಗಳು ತಾವು ಒಳಪಡುವ ಪಂಚಾಯತಿ, ಪೊಲೀಸ್ ಠಾಣೆ ಹಾಗೂ ಕೆಇಬಿಗಳಿಂದ ಕಟ್ಟುನಿಟ್ಟಾಗಿ ಅನುಮತಿಯನ್ನು ಪಡೆಯಬೇಕು, ಇದರಿಂದ ಆಚರಣೆ ಸಂದರ್ಭದಲ್ಲಿ ಏನಾದರೂ ಅಹಿತಕರ ಘಟನೆಗಳು ಜರುಗಿದಾಗ ಮಂಡಳಿಯ ಜಗಹವನ್ನು ಗುರುತಿಸಿ, ಸಂಬಂಧಿಸಿದ ಇಲಾಖೆಗಳು ಸೂಕ್ತ ಸಹಾಯ ಮಾಡಲು ಅನುಕೂಲವಾಗುತ್ತದೆ. ಶಬ್ಧ ಹಾಗೂ ವಾಯು ಮಾಲಿನ್ಯಕ್ಕೆ ಕಾರಣಗಳಾದ ಡಿಜೆ ಮತ್ತು ಜನ ನಿಭಿಡ ಪ್ರದೇಶಗಳಲ್ಲಿ ಅತಿರೇಕದ ಪಟಾಕಿ ಸಿಡಿಸುವುದನ್ನು ನಿಬಂಧಿಸಲಾಗಿದೆ ಎಂದ ಅವರು ನಿಯಮ ಪಾಲಿಸದ ವ್ಯಕ್ತಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಸೀಲ್ದಾರ ಶ್ರೀಶೈಲ ಗುಡುಮೆ ಮಾತನಾಡಿ, ಭಾರತ ಹಬ್ಬಗಳ ದೇಶ. ಪ್ರತಿಯೊಂದು ಹಬ್ಬದ ಆಚರಣೆಗೂ ಹಿನ್ನಲೆ ಇರುತ್ತದೆ, ಅದನ್ನು ತಿಳಿದುಕೊಂಡು ಪರಿಸರಕ್ಕೆ ಪೂರಕವಾಗಿ ಶ್ರದ್ಧಾ ಹಾಗೂ ಭಕ್ತಿಯಿಂದ ಆಚರಣೆಯಾದರೆ ಹಬ್ಬಗಳಿಗೆ ಅರ್ಥಬರುತ್ತದೆ. ಮಣ್ಣಿನ ಗಣಪತಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತ ಸಾರ್ವಜನಿಕರಿಗೆ ಕಿರಿಕಿರಿ ಯಾಗುವಂತ ಡಿಜೆಗಳನ್ನು ಹಚ್ಚುವ ಬದಲು, ಕರಡಿ ಮಜಲು, ಸಂಬಾಳದಂತಹ ದೇಸಿ ವಾದ್ಯ ಮೇಳಗಳೊಂದಿಗೆ, ಮದ್ಯಪಾನ ಮಾಡದೇ ಭಕ್ತಿ ಪೂರ್ವಕವಾಗಿ ಗಣಪತಿಯನ್ನು ಬರಮಾಡಿಕೊಂಡು, ವಿಸರ್ಜಿಸಿದರೆ ಆಚರಣೆಗೂ ಕಳೆ ಬರುತ್ತದೆ ಎಂದು ನೆರೆದ ಗಣಪತಿ ಮಂಡಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮೂಡಲಗಿ ಪಿಎಸ್‌ಐ ವೈ.ಎಸ್. ಬಿಸನಾಳ, ಕುಲಗೋಡ ಪಿಎಸ್‌ಐ ಆನಂದ ಬಿ, ಹೆಸ್ಕಾಂ ಅಧಿಕಾರಿ ಪಿ.ವಿ. ಚೌಹಾನ, ಸ್ಥಳೀಯ ಮುಖಂಡರು ಸೇರಿದಂತೆ ಅನೇಕ ಗಣಪತಿ ಮಂಡಳಿಗಳ ಪದಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.