ಹೊಸಪೇಟೆ, ಅ.4: ರಾಜ್ಯ ರೈತ ಹಸಿರು ಸೇನೆ ಹಸುರೀಕರಣ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆ ಉದ್ದೇಶದಿಂದ ನಗರದ ಅನಂತಶಯನಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಡೆದ ಶಿಬಿರದಲ್ಲಿ ನೂರಾರು ಸಾರ್ವಜನಿಕರು ಹಾಗೂ ಯುವಕರು ಭಾಗವಹಿಸಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಹಾಗೂ ಸೂಕ್ತ ಸಲಹೆಗಳನ್ನು ಪಡೆದರು.
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಚೈತ್ರಾ ತುಂಗದ, ಶಸ್ತ್ರಚಿಕಿತ್ಸಾ ತಜ್ಞ ಡಾ. ಶಂಕರ್ ಎಂ.ಆರ್., ಹೃದಯರೋಗ ತಜ್ಞ ಡಾ. ಟಿ. ಸಂದೀಪ್ ಹಾಗೂ ಜಠರ, ಕರುಳು ಮತ್ತು ಯಕೃತ್ ತಜ್ಞ ಡಾ. ರವಿ ಕುಮಾರ್ ಸೇರಿದಂತೆ ತಜ್ಞ ವೈದ್ಯರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಗಂಟೆ ಸೋಮಶೇಖರ್, ಇತ್ತೀಚಿನ ದಿನಗಳಲ್ಲಿ 18ರಿಂದ 38 ವರ್ಷದೊಳಗಿನ ಯುವಜನರು ಧೂಮಪಾನ, ಮದ್ಯಪಾನ, ಡ್ರಗ್ಸ್ ಹಾಗೂ ತಂಬಾಕಿನಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು. ಇವುಗಳಿಂದ ಚಿಕ್ಕ ವಯಸ್ಸಿನಲ್ಲೇ ಹೃದಯ, ಕಿಡ್ನಿ ವೈಫಲ್ಯ ಹಾಗೂ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಕರೆ ನೀಡಿದರು.
ವಯೋವೃದ್ಧರಷ್ಟೇ ಅಲ್ಲದೆ ಯುವಕರಲ್ಲಿಯೂ ಬಿಪಿ, ಸಕ್ಕರೆ ಕಾಯಿಲೆ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಜ್ಞ ವೈದ್ಯರು ಸಲಹೆ ನೀಡಿದರು.
ಟ್ರಸ್ಟ್ ಪದಾಧಿಕಾರಿಗಳು, ಶಾಲೆಯ ಮುಖ್ಯಸ್ಥರು, ವೈದ್ಯಕೀಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದಿಂದ ಶಿಬಿರ ಯಶಸ್ವಿಯಾಗಿ ನಡೆಯಿತು.