ಚಿಕ್ಕೋಡಿ: ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ಚಿಕ್ಕೋಡಿ ಬ್ರಾಹ್ಮಣ ಸಮಾಜ, ಶ್ರೀ ಸಿದ್ಧಿ ವಿನಾಯಕ ಸೌಹಾರ್ದ ಕ್ರೆಡಿಟ್ ಸೊಸೈಟಿ ಹಾಗೂ ಕೇಶವ ಸ್ಮೃತಿ ಪ್ರತಿಷ್ಠಾನ ಚಿಕ್ಕೋಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಹುಬ್ಬಳ್ಳಿಯ ಡಾ. ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ಸಂಶೋಧನಾ ಪ್ರತಿಷ್ಠಾನದ ಸಹಯೋಗದೊಂದಿಗೆ ಈ ಶಿಬಿರ ನಡೆದಿದ್ದು, ಪದ್ಮಶ್ರೀ ಪುರಸ್ಕೃತ ಡಾ. ಎಂ. ಎಂ. ಜೋಶಿ ಅವರು ಚಾತುರ್ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ೧,೦೦೮ ಉಚಿತ ನೇತ್ರ ಶಸ್ತ್ರಚಿಕಿತ್ಸೆಗಳ ಸಂಕಲ್ಪದ ಭಾಗವಾಗಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ೨೦೦ಕ್ಕೂ ಹೆಚ್ಚು ರೋಗಿಗಳ ಕಣ್ಣಿನ ತಪಾಸಣೆ ನಡೆಸಲಾಯಿತು. ಇವರಲ್ಲಿ ೩೪ಕ್ಕೂ ಹೆಚ್ಚು ರೋಗಿಗಳಿಗೆ ಪೊರೆ (ಮೋತಿಬಿಂದೂ) ಹಾಗೂ ಇತರೆ ಕಣ್ಣಿನ ಶಸ್ತ್ರಚಿಕಿತ್ಸೆಗಳ ಅಗತ್ಯವಿದ್ದು, ಅವರಿಗೆ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿಕೊಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಿದ್ಧಿ ವಿನಾಯಕ ಸೊಸೈಟಿಯ ಅಧ್ಯಕ್ಷ ಸಂಜಯ್ ಅಡಕೆ ಅವರು, ಈ ಭಾಗದ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಿದ ಸಂಘಟಕರ ಶ್ರಮವನ್ನು ಶ್ಲಾಘಿಸಿದರು. ಚಿಕ್ಕೋಡಿ ಬ್ರಾಹ್ಮಣ ಸಮಾಜದ ಅಧ್ಯಕ್ಷ ಓಂಕಾರ ಸುಧೀರ ಕುಲಕರ್ಣಿ ಮಾತನಾಡಿ, ಇಂತಹ ಉಚಿತ ವೈದ್ಯಕೀಯ ಶಿಬಿರಗಳಿಂದ ಬಡ ಹಾಗೂ ಅಗತ್ಯವಿರುವ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಸಂಕೇಶ್ವರದ ಡಾ. ಬಾಲಕೃಷ್ಣ ಮತ್ತು ಡಾ. ಶ್ರೀಮತಿ ಪಾಟೀಲ ಅವರು ಕಣ್ಣಿನ ಆರೈಕೆ ಹಾಗೂ ಆರೋಗ್ಯದ ಕುರಿತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿನಾಯಕ ಕುಲಕರ್ಣಿ, ಕಾರ್ಯದರ್ಶಿ ಗುರುರಾಜ ದೇಶಪಾಂಡೆ, ಪ್ರಾಣೇಶ ಕೌಜಲಗಿ, ಯೋಗೇಶ ಕುಲಕರ್ಣಿ, ಸಂಕೇತ ಮಾಂಜರೇಕರ, ಪ್ರಶಾಂತ್ ಜೋಶಿ, ಚಿದಂಬರಂ ಜೋಶಿ, ಶ್ರೀಪಾದ ಹುನಗುಂದ, ಅಕ್ಷಯ ದಾತಾರ್, ಕಟ್ಟಿ, ಪವನ್ ಕುಲಕರ್ಣಿ, ಪ್ರಸನ್ನ ಬಾಗೇವಾಡಿ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸರ್ವ ಕಾರ್ಯಕರ್ತರು ಉಪಸ್ಥಿತರಿದ್ದರು.
ಶಿಬಿರವು ಅತ್ಯಂತ ಯಶಸ್ವಿಯಾಗಿ ನೆರವೇರಿದ್ದಕ್ಕಾಗಿ ಆಯೋಜಕರು ಹಾಗೂ ಬ್ರಾಹ್ಮಣ ಸಮಾಜದ ಪದಾಧಿಕಾರಿಗಳು ಭಾಗವಹಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.