ತಾಳಿಕೋಟೆ, ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ದೇವರಹಿಪ್ಪರಗಿ ಹಾಗೂ ತಾಳಿಕೋಟಿ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಿಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಳಿಕೋಟೆಯ ಪ್ರವಾಸಿ ಮಂದಿರದ ಪಕ್ಕದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ದೇವರಹಿಪ್ಪರಗಿ ಮತಕ್ಷೇತ್ರದ ಮಾಜಿ ಶಾಸಕ ಸೋಮನಗೌಡ ಪಾಟೀಲ ಮಂಗಳವಾರ ಧರಣಿ ಸ್ಥಳಕ್ಕೆ ಆಗಮಿಸಿ ಸಂಪೂರ್ಣ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಇನ್ನೂ ಸಂಪೂರ್ಣವಾಗಿ ಬರ ಘೋಷಣೆ ಮಾಡದೆ ಅನಗತ್ಯವಾಗಿ ಕಾಲಹರಣ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ರೈತರ ಹಿತ ಸರ್ಕಾರದ ಮೊದಲ ಆದ್ಯತೆಯಾಗಬೇಕು. ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸುವುದನ್ನು ಬಿಟ್ಟು ಮೊದಲು ರಾಜ್ಯದ ಎಲ್ಲಾ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ, ಅರ್ಹ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸುವಲ್ಲಿ ಸರ್ಕಾರ ವಿಳಂಬ ಮಾಡಿದರೆ ರೈತರೊಂದಿಗೆ ನಿಂತು ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅವರು, ಬರ ಘೋಷಣೆಯಾಗುವವರೆಗೆ ಧರಣಿಯಿಂದ ಹಿಂದೆ ಸರಿಯದಂತೆ ರೈತರಿಗೆ ಕರೆ ನೀಡಿದ ಅವರು ಸರ್ಕಾರ ಇನ್ನಷ್ಟು ವಿಳಂಬ ಮಾಡಿದರೆ ಇಡೀ ತಾಳಿಕೋಟಿ ತಾಲೂಕನ್ನು ಬಂದ್ ಮಾಡುವಂತಹ ಹೋರಾಟಕ್ಕೂ ಮುಂದಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ತಾಲೂಕು ಉಪಾಧ್ಯಕ್ಷ ರಾಮನಗೌಡ ಹಾದಿಮನಿ ಮಾತನಾಡಿ, ವಿಜಯಪುರ ಜಿಲ್ಲೆಗೆ ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿಯೂ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಪ್ರಸ್ತುತ ಬರಗಾಲ ಘೋಷಣೆಯಲ್ಲಿಯೂ ಜಿಲ್ಲೆಗೆ ಅನ್ಯಾಯವಾಗಿದೆ. ಒಂದು ವೇಳೆ ಸರ್ಕಾರ ಬರಗಾಲ ಪಟ್ಟಿಯಿಂದ ತಾಳಿಕೋಟಿ ತಾಲೂಕನ್ನು ಕೈಬಿಟ್ಟರೆ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಮಯದಲ್ಲಿ ಮುಖಂಡರುಗಳಾದ ಸಂಗನಗೌಡ ಹೆಗರಡ್ಡಿ, ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ ಬಿರಾದಾರ, ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಹಳ್ಳಿ, ರಾಮನಗೌಡ ಹಾದಿಮನಿ, ಅಶೋಕ ಉಪ್ಪಲದಿನ್ನಿ, ಚಿದಾನಂದ ಬಡಿಗೇರ, ಮಂಜುನಾಥ ಬಡಿಗೇರ, ಪ್ರಕಾಶ್ ಬಡಿಗೇರ, ರಮೇಶ್ ಬಡಿಗೇರ, ಮಲ್ಲನಗೌಡ ಆಲರೆಡ್ಡಿ, ಸಂಗನಗೌಡ ಟಕ್ಕಳಕಿ, ಗೋಪಾಲ್ ನಾಯ್ಕೋಡಿ, ಸುಭಾಶ್ ಗುಂಡಗಿ, ಶಿವನಗೌಡ ಬಿರಾದಾರ ಹಾಗೂ ರೈತ ಮಹಿಳೆಯರಾದ ಕಸ್ತೂರಿ ಮುದ್ದನ್ನೂರ, ಬೇಬಿ ಮುದ್ದನ್ನೂರ, ಶಾಂತಮ್ಮ ಯಾಳವಾರ, ಸಂಗಮ್ಮ ಟಕ್ಕಳಕಿ, ಪುಷ್ಪ ಬಿರಾದಾರ, ಜಯಶ್ರೀ ಪಾಟೀಲ, ಶಂಕ್ರಮ್ಮ ಉಪ್ಪಲದಿನ್ನಿ, ಕಮಲಾಕ್ಷಿ ಬಿರಾದಾರ, ಸಂಗಮ್ಮ ನಾವಿ ಸೇರಿದಂತೆ ಹಲವರು ಭಾಗವಹಿಸಿದ್ದರು.