ಬಳ್ಳಾರಿ,ನ.28 : ರಸಗೊಬ್ಬರಗಳ ಕಾಳಸಂತೆ ಮಾರಾಟವನ್ನು ತಡೆಗಟ್ಟಲು ಮತ್ತು ರೈತರಿಗೆ ಅಗತ್ಯ ಕೃಷಿ ಪರಿಕರಗಳು ಸುಲಭವಾಗಿ ದೊರಕುವಂತೆ ಮಾಡಲು ‘ಫ್ರೇಮ್‌ವರ್ಕ್ ಫಾರ್ ಫರ್ಟಿಲೈಜರ್ ಸೇಲ್ಸ್’ ಆ್ಯಪ್ ಸಹಕಾರಿಯಾಗಲಿದೆ ಎಂದು ಬಳ್ಳಾರಿ ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ತಿಳಿಸಿದರು.ಗುರುವಾರ, ನಗರದ ಹಳೆಯ ಜಿಲ್ಲಾಧಿಕಾರಿಗಳ ಆವರಣದಲ್ಲಿರುವ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಬಳ್ಳಾರಿ ತಾಲೂಕಿನ ಕೃಷಿ ಪರಿಕರ ಮಾರಾಟಗಾರರು ಮತ್ತು ರೈತರಿಗಾಗಿ ಏರ್ಪಡಿಸಿದ್ದ ಎಫ್‌ಎಫ್‌ಎಸ್ ಆ್ಯಪ್ ಬಳಕೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೇಂದ್ರ ಸರ್ಕಾರದ ಯೋಜನೆಯಡಿ ರಸಗೊಬ್ಬರ ಖರೀದಿಯನ್ನು ಸರಳೀಕರಿಸಲು, ಅನಧಿಕೃತ ಹೆಚ್ಚಿನ ದರದ ಮಾರಾಟ ತಪ್ಪಿಸಲು ಹಾಗೂ ಅಂಗಡಿಗಳ ಮುಂದೆ ರೈತರು ದಿನಗಟ್ಟಲೆ ಸಾಲು ನಿಲ್ಲುವುದನ್ನು ತಪ್ಪಿಸಲು ಈ ಆ್ಯಪ್ ಜಾರಿಗೆ ತರಲಾಗಿದೆ. ರೈತರು ಗೂಗಲ್ ಪ್ಲೇಸ್ಟೋರ್‌ನಿಂದ FFS ಆ್ಯಪ್ ಡೌನ್‌ಲೋಡ್ ಮಾಡಿ, ಆಧಾರ್ ಸಂಖ್ಯೆ ಮತ್ತು ಓಟಿಪಿ ನಮೂದಿಸಿ ತಾವು ಬೆಳೆದ ಬೆಳೆ ವಿವರ ದಾಖಲಿಸಿದರೆ, ಆ ಬೆಳೆಗೆ ಅಗತ್ಯವಿರುವ ಯೂರಿಯಾ, ಕಾಂಪ್ಲೆಕ್ಸ್, ಡಿಎಪಿ ಮತ್ತು ಪೊಟ್ಯಾಷ್ ಗೊಬ್ಬರದ ಪ್ರಮಾಣವನ್ನು ಆ್ಯಪ್ ತೋರಿಸುತ್ತದೆ ಎಂದು ತಿಳಿಸಿದರು.ಖರೀದಿಸಲು ಇಚ್ಛಿಸುವ ಕೃಷಿ ಪರಿಕರ ಮಳಿಗೆಯನ್ನು ಆಯ್ಕೆ ಮಾಡಿದಾಗ ಕ್ಯೂಆರ್ ಕೋಡ್ ಸೃಜನೆಯಾಗುತ್ತದೆ; 72 ಗಂಟೆಯೊಳಗೆ ಸಂಬಂಧಪಟ್ಟ ಅಂಗಡಿಗೆ ತೆರಳಿ ಕ್ಯೂಆರ್ ಕೋಡ್ ತೋರಿಸುವ ಮೂಲಕ ನಿಗದಿತ ಗೊಬ್ಬರವನ್ನು ಖರೀದಿಸಬಹುದು ಎಂದರು.ಕ್ಯೂಆರ್ ಕೋಡ್ ವ್ಯವಸ್ಥೆಯು ಡಿಸೆಂಬರ್ 1ರಿಂದ ಜಾರಿಗೆ ಬರಲಿದ್ದು, ಪ್ರತಿ ರೈತನಿಗೂ ಪ್ರತ್ಯೇಕ ಕ್ಯೂಆರ್ ಕೋಡ್ ಸೃಜನೆಯಾಗಲಿದೆ ಎಂದು ಬಳ್ಳಾರಿ ಉಪ ಕೃಷಿ ನಿರ್ದೇಶಕ-1 ಸಿ.ಎನ್. ಮಂಜುನಾಥ ತಿಳಿಸಿದರು. ಇದರಿಂದ ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಅವಕಾಶವಿರುವುದಿಲ್ಲ ಎಂದು ಅವರು ಹೇಳಿದರು.ರೈತರು ಮತ್ತು ಮಾರಾಟಗಾರರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ನೀಡಿ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ತಿಳಿಸಿದರು.ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿ ಪವಿತ್ರ ಜಿ. ಸ್ವಾಗತಿಸಿದರು. ಕೃಷಿ ಅಧಿಕಾರಿಗಳಾದ ಸೋಮಶೇಖರ್ ಕೆ., ಸಂತೋಷ ಕೆ.ಆರ್., ಸಣ್ಣ ಜಂಬಣ್ಣ ಹಾಗೂ ಬಳ್ಳಾರಿ, ಮೋಕ ಮತ್ತು ರೂಪನಗುಡಿ ಭಾಗದ ಕೃಷಿ ಪರಿಕರ ಮಾರಾಟಗಾರರು ಮತ್ತು ರೈತರು ಉಪಸ್ಥಿತರಿದ್ದರು.