ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷವು ಭಾರತದ ಆರ್ಥಿಕತೆ ಮೇಲೆ ಪೂರೈಕೆ ಆಘಾತವನ್ನು ಉಂಟುಮಾಡುತ್ತಿದ್ದು, ತೈಲ ಪೂರೈಕೆ ಅಡಚಣೆ ಹೀಗೆ ಮುಂದುವರೆದಲ್ಲಿ ಹಣದುಬ್ಬರ ಅಪಾಯ ಎದುರಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಆರ್ಥಿಕ ಸಚಿವಾಲಯ ಎಚ್ಚರಿಕೆ ನೀಡಿದೆ.
ಎಪ್ರಿಲ್ ತಿಂಗಳ ಆರ್ಥಿಕ ವಿಶ್ಲೇಷಣೆಯಲ್ಲಿ ಈ ಕುರಿತು ತಿಳಿಸಿರುವ ಸಚಿವಾಲಯ, ಗಲ್ಫ್ ಪ್ರದೇಶಗಳಲ್ಲಿ ತೈಲ ಮತ್ತು ಅನಿಲ ಉತ್ಪಾದನೆ ಮೇಲಿನ ಹಾನಿಯನ್ನು ಸರಿ ಮಾಡಲು ಅನೇಕ ತಿಂಗಳುಗಳು ಬೇಕಾಗುತ್ತವೆ. ಹವಾಮಾನ ಪರಿಸ್ಥಿತಿಯಿಂದ ಮಾನ್ಸೂನ್ನ ಖಾರಿಫ್ ಋತುವಿನಲ್ಲಿ ವಿಳಂಬ ಸಂಭವಿಸಿದಲ್ಲಿ, ಹಣದುಬ್ಬರದ ಒತ್ತಡಗಳು ತೀವ್ರಗೊಳ್ಳಬಹುದು ಎಂದು ಅದು ಹೇಳಿದೆ.
ದೇಶಿಯವಾಗಿ ಬಲಶಾಲಿಯಾಗಿದ್ದರೂ ಬಾಹ್ಯ ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ 2026 27ನೇ ಹಣಕಾಸು ವರ್ಷವನ್ನು ಪ್ರವೇಶಿಸುತ್ತಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಶೇಕಡಾ 7.6 ರಷ್ಟು ನಿಜವಾದ ಜಿಡಿಪಿ ಬೆಳವಣಿಗೆಯನ್ನು ದಾಖಲಿಸಿದ್ದು, ಮುಂಬರುವ ವರ್ಷಕ್ಕೆ ಶೇಕಡಾ 7ರಿಂದ 7.4 ರಷ್ಟು ಬೆಳವಣಿಗೆಯ ಮುನ್ಸೂಚನೆಯನ್ನು ಬೆಂಬಲಿಸುತ್ತದೆ.
ಆದಾಗ್ಯೂ ಪಶ್ಚಿಮ ಏಷ್ಯಾ ಪರಿಣಾಮವು ಭವಿಷ್ಯ ಅನಿಶ್ಚಿತೆಯಿಂದ ಕೂಡಿದೆ. ಪೂರೈಕೆಯು ಈಗಾಗಲೇ ಆರ್ಥಿಕತೆ ಮೇಲೆ ಆಘಾತ ಮೂಡಿಸಿರುವುದನ್ನು ಕಾಣಬಹುದಾಗಿದೆ. ದರ ಹೆಚ್ಚಳ ಮತ್ತು ಪೂರೈಕೆ ಬೇಡಿಕೆಯು ಪ್ರಮುಖ ವಿಚಾರವಾಗಿದೆ. ಇದು ವಿಶೇಷವಾಗಿ ಪೆಟ್ರೋಲಿಯಂ ವಲಯದಿಂದ, ವ್ಯಾಪಕ ಶ್ರೇಣಿಯ ಕೈಗಾರಿಕೆಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.
ವ್ಯವಹಾರಗಳು ಲಾಭವನ್ನು ರಕ್ಷಿಸಿಕೊಳ್ಳಲು ಗ್ರಾಹಕರಿಗೆ ಹೆಚ್ಚಿನ ವೆಚ್ಚವನ್ನು ವರ್ಗಾಯಿಸುವುದರಿಂದ ಹಣದುಬ್ಬರವು ವೆಚ್ಚ ತಳ್ಳುವಿಕೆ ಹಣದುಬ್ಬರವಾಗಿ ಬದಲಾಗಬಹುದು. ಸಣ್ಣ ಕೈಗಾರಿಕೆಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಅವಲಂಬಿಸಿರುವುದರಿಂದ, ಹೆಚ್ಚಿನ ಇಂಧನ ಬೆಲೆಗಳ ಪರಿಣಾಮವು ವ್ಯಾಪಕವಾಗಿರಲಿದೆ.
ವರದಿಯು ಕೇವಲ ಪಶ್ಚಿಮ ಏಷ್ಯಾ ಸಂಘರ್ಷ ಹಣದುಬ್ಬರದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಮಾತ್ರ ತಿಳಿಸುವುದಿಲ್ಲ, ಬದಲಾಗಿ ಇದು ವ್ಯಾಪಾರ ಮತ್ತು ಆರ್ಥಿಕ ಹರಿವಿನ ಮೇಲೆ ಕೂಡ ಪ್ರಭಾವ ಬೀರಲಿದೆ. ಇದೆ ವೇಳೆ ಭಾರತೀಯ ದೇಶಿಯ ಬೇಡಿಕೆ, ನೀತಿ ಬೆಂಬಲ, ಸ್ಥಿತಿಸ್ಥಾಪಕತ್ವ ಆರ್ಥಿಕ ವ್ಯವಸ್ಥೆ ಮತ್ತು ನಿರಂತರ ಸಾರ್ವಜನಿಕ ಹೂಡಿಕೆಯು ಬಾಹ್ಯ ಆಘಾತಗಳ ವಿರುದ್ಧ ಅಲ್ಪಮಟ್ಟಿಗಿನ ರಕ್ಷಣೆ ನೀಡಲಿದೆ.
ಇಂಧನ ಮತ್ತು ರಸಗೊಬ್ಬರ ಪೂರೈಕೆಯಲ್ಲಿನ ಅಡಚಣೆಗಳು ದೀರ್ಘಕಾಲದವರೆಗೆ ಮುಂದುವರಿದರೆ ಈ ಅಂಶಗಳು ಸಾಕಾಗುತ್ತವೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಹವಾಮಾನ ಪರಿಸ್ಥಿತಿಗಳಿಂದ ಹೆಚ್ಚುವರಿ ಅಪಾಯ ಬೀರುವ ಸಾಧ್ಯತೆ ಇದೆ. ಎಲ್ ನಿನೊದಿಂದ ಸಾಮಾನ್ಯಕ್ಕಿಂತ ಕಡಿಮೆ ಮಳೆ ನಿರೀಕ್ಷಿಸಲಾಗಿದ್ದು, ಇದು ಹಣದುಬ್ಬರವನ್ನು ಮತ್ತಷ್ಟು ಹೆಚ್ಚಿಸಬಹುದು. ಹಣಕಾಸಿನ ಮತ್ತು ಬಾಹ್ಯ ಕೊರತೆಗಳನ್ನು ಹೆಚ್ಚಿಸಬಹುದು. ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.