ಪ್ರತೀನಿತ್ಯ ಧರ್ಮಸ್ಥಳ ಪಂಚಾಯತಿಯಿಂದ ದಾಖಲೆಗಳನ್ನು ತರಿಸಿಕೊಳ್ಳುತ್ತಿರುವ ಎಸ್ಐಟಿ, ಶವ ಹೂತು ಹಾಕಿದ ವಿವರ, ಯುಡಿಆರ್, ರಶೀದಿಗಳ ಮಾಹಿತಿ ಸಂಗ್ರಹ ಮಾಡುತ್ತಿದೆ. 1987 ರಿಂದ 2025 ರವರೆಗಿನ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿರುವ ಎಸ್ಐಟಿ, ಮಟ್ಟಣ್ಣನವರ್ ಕೊಟ್ಟ ದಾಖಲೆ ಹಾಗೂ ಪಂಚಾಯತ್ ಮೂಲ ದಾಖಲೆಗಳ ಪರಿಶೀಲನೆ ಮಾಡುತ್ತಿದೆ. ಶವ ದಫನ ದಾಖಲೆಗಳಲ್ಲಿ ಸಹಿ ಹಾಕಿರುವ ವ್ಯಕ್ತಿಗಳಿಗೂ ವಿಚಾರಣೆ ಬಿಸಿ ತಟ್ಟಲು ಶುರುವಾಗಿದೆ. ಮಾಜಿ ಅಧ್ಯಕ್ಷರು, ಪಿಡಿಓ, ಸಿಬ್ಬಂದಿಗಳನ್ನು ಪ್ರತಿ ನಿತ್ಯ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈ ಮೂಲಕ ಧರ್ಮಸ್ಥಳ ಬುರುಡೆ ಕೇಸ್ನ ಎಲ್ಲಾ ಆರೋಪಗಳಿಗೆ ಸ್ಪಷ್ಟತೆ ಕೊಡಲು ಎಸ್ಐಟಿ ಮುಂದಾಗಿದೆ.
ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಬಂಗ್ಲೆಗುಡ್ಡ ರಹಸ್ಯ ಬಯಲು ಮಾಡಲು ಎಸ್ಐಟಿ ಅಧಿಕಾರಿಗಳು ಪಣತೊಟ್ಟಿದ್ದು, ಗೋಪ್ಯವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಗುರುವಾರ ಸಂಜೆ ವೇಳೆ ಮತ್ತೆ ಬಂಗ್ಲೆಗುಡ್ಡದಲ್ಲಿ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಎಸ್ಐಟಿ ಅಧಿಕಾರಿ ಸೈಮನ್ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಸೌಜನ್ಯ ಮಾವ ವಿಠಲ ಗೌಡ ಹೇಳಿಕೆಯ ಸತ್ಯಾಸತ್ಯತೆ ತಿಳಿಯಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.