ಚನ್ನಮ್ಮನ ಕಿತ್ತೂರು: ಶಿಕ್ಷಕರ ದಿನಾಚರಣೆಯನ್ನು ಸಮಾಜಮುಖಿ ಸೇವೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕಿತ್ತೂರು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಸರ್ಕಾರಿ ನೌಕರರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಸಾಂಸ್ಕೃತಿಕ ಭವನದಲ್ಲಿ ಬೆಳಗ್ಗೆ 9 ಗಂಟೆಗೆ ಆರಂಭವಾದ ಶಿಬಿರದಲ್ಲಿ ‘ರಕ್ತದಾನವೇ ಮಹಾದಾನ’ ಎಂಬ ಸಂದೇಶ ಸಾರಲಾಯಿತು. ಸರ್ಕಾರಿ ನೌಕರರು, ಯುವಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು.
ಶಿಬಿರದಲ್ಲಿ ರಕ್ತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.ಶಿಬಿರದಲ್ಲಿ ಒಟ್ಟು 142 ಮಂದಿ ರಕ್ತದಾನ ಮಾಡಿದ್ದು, ಪ್ರತಿಯೊಬ್ಬರಿಂದ 350 ಎಮ್ ಎಲ್ ರಕ್ತವನ್ನು ಸಂಗ್ರಹಿಸಲಾಗಿದೆ.ಈ ಸಂದರ್ಭದಲ್ಲಿ ಪಿಎಸ್ಐ ಎಸ್. ಭರತ, ತಾಲೂಕಾ ಆರೋಗ್ಯ ಅಧಿಕಾರಿ ಡಾ ಸಂತೋಷ ಗಡೆನ್ನವರ, ವೈದ್ಯಾಧಿಕಾರಿ ಡಾ ಇಮಾದ ರಾಜಗೋಳಿ, ಶಿಕ್ಷಣ ಸಮನ್ವಯ ಅಧಿಕಾರಿ ಗಾಯತ್ರಿ ಅಜ್ಜನ್ನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಸುನಂದಾ ಪಾಟೀಲ, ಡಾ. ಗಜಾನಂದ ಸೊಗಲದ, ಸಂಜೀವ ಲೋಕಾಪೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಬಾಕ್ಸ್: 1
“ಈ ಬಾರಿಯ ಶಿಕ್ಷಕರ ದಿನಾಚರಣೆಯನ್ನು ಕೇವಲ ಹೂವು, ಬೊಕ್ಕೆ ಹಾಗೂ ಪ್ರಶಸ್ತಿಗಳಿಗೆ ಸೀಮಿತಗೊಳಿಸದೆ, ರಕ್ತದಾನದಂತಹ ಸಮಾಜಮುಖಿ ಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡಿರುವುದು ಸಂತಸದ ಸಂಗತಿ.”
— ಮಹೇಶ ಹೂಲಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ಕಿತ್ತೂರು
“ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜನರ ಪ್ರಾಣ ಉಳಿಸಲು ಸಾಧ್ಯ. ರಕ್ತದಾನವು ಕೇವಲ ಒಬ್ಬರ ಜೀವ ಉಳಿಸುವ ಕಾರ್ಯವಲ್ಲ, ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ಆಶಾಕಿರಣವಾಗುವ ಮಾನವೀಯ ಸೇವೆಯಾಗಿದೆ. ವಿಶೇಷವಾಗಿ ಯುವಕರು ಹಾಗೂ ವಿದ್ಯಾರ್ಥಿಗಳು ರಕ್ತದಾನದ ಮಹತ್ವವನ್ನು ಅರಿತುಕೊಂಡು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ರಕ್ತದಾನ ಶಿಬಿರ ಆಯೋಜಿಸಿರುವುದು ಶಿಕ್ಷಕರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ,”— ಚನ್ನಬಸಪ್ಪ ತುಬಾಕದ, ಕ್ಷೇತ್ರ ಶಿಕ್ಷಣಾಧಿಕಾರಿ, ಚ. ಕಿತ್ತೂರು