ಬಳ್ಳಾರಿ: 05:ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀ ಉತ್ತರಾದಿ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಹಬ್ಬದ ಸಂಭ್ರಮ, ಅತ್ಯಂತ ಸಡಗರ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು. ಶ್ರೀಮಠದ ಪಂ.ಪ್ರವೀಣ್ ಆಚಾರ, ಪಂ.ನವೀನ್ ಆಚಾರ ಅವರ ನೇತೃತ್ವದಲ್ಲಿ, ಕಡಗೋಲು ಶ್ರೀ ಗೋಪಾಲಕೃಷ್ಣ ಸಹಿತ ಪಂಚ ವೃಂದಾವನಗಳಿಗೆ ವಿಶೇಷ ಪೂಜೆ, ಶ್ರೀಕೃಷ್ಣನಿಗೆ ವಿಶೇಷ ಬೆಣ್ಣೆ ಅಲಂಕಾರ, ಸೇರಿದಂತೆ ವಿವಿಧ ಪೂಜೆಗಳು ಶುಕ್ರವಾರ ಬೆಳಿಗ್ಗೆ ವಿಜೃಂಭಣೆಯಿಂದ ನಡೆದವು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀಕೃಷ್ಣ ಹಾಗೂ ರಾಧೆಯ ವೇಷ ಭೂಷಣ ಧರಿಸಿದ ಮುದ್ದು ಮಕ್ಕಳು, ನೃತ್ಯಗಳು ಗಮನಸೆಳೆದವು. ರಾತ್ರಿ ಶ್ರೀಕೃಷ್ಣನಿಗೆ ಅರ್ಘೆ, ವಿಶೇಷ ಪೂಜೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ನಡೆದವು. ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ನೂರಾರು ಭಕ್ತರು ಶ್ರೀಕೃಷ್ಣನ ದರ್ಶನ ಪಡೆದು, ಪೂಜೆ, ಅರ್ಚನೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.