ಗದಗ, 15 : ಭಾರತೀಯ ಜನತಾ ಪಾರ್ಟಿಯ ರೋಣ ಮಂಡಲ ಪ್ರಧಾನ ಕಾರ್ಯದರ್ಶಿಯಾದ ರಮೇಶ ವಕ್ಕರ ಅವರು ನಿಷ್ಠಾವಂತ ಕಾರ್ಯಕರ್ತರಾದ ನಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದು, ಅವರಿಗೆ ಉಚ್ಛಾಟನೆ ಮಾಡುವ ಅಧಿಕಾರ ಇದೆಯಾ ಎಂದು ಬಿಜೆಪಿಯ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ ಅವರು ಸ್ಪಷ್ಟಪಡಿಸಬೇಕು ಎಂದು ಬಿಜೆಪಿಯ ಮುಖಂಡರಾದ ಉಮೇಶ ಚನ್ನು ಪಾಟೀಲ ಆಗ್ರಹಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಳೆದ 30 ವರ್ಷಗಳಿಂದ ಅಂದರೆ
ನನ್ನ ತಂದೆಯವರಾದ ದಿವಂಗತ ಚನ್ನು ಪಾಟೀಲ ಅವರ ಕಾಲದಿಂದ ನಮ್ಮ ಮನೆತನ ಭಾರತೀಯ ಜನತಾ ಪಾರ್ಟಿಗೆ ನಿಷ್ಠರಾಗಿ, ಪಾರ್ಟಿಯ ತತ್ವ, ಸಿದ್ಧಾಂತಗಳನ್ನು ಪಾಲಿಸುತ್ತ ಪಾರ್ಟಿಯ ಸಂಘಟನೆಯಲ್ಲಿ ತೊಡಗಿಕೊಂಡು ಬಂದಿದ್ದೇವೆ. ನಾನು ಕೂಡಾ 2020 ರಲ್ಲಿ ಬೂತನ ಪೇಜ ಪ್ರಮುಖನಾಗಿ, ಸಾಮಾಜಿಕ ಜಾಲತಾಣ ಪ್ರಕೋಷ್ಟದ ಸಂಚಾಲಕನಾಗಿ ಹಾಗೂ ರೋಣ ಯುವ ಮಂಡಲದ ಅಧ್ಯಕ್ಷನಾಗಿ ಪಕ್ಷದ ಸೇವೆ, ಸಂಘಟನೆ ಮಾಡುತ್ತ ಬಂದಿರುವೆ. ಪಕ್ಷದ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಸೇವೆ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ನನ್ನನ್ನು ಹಾಗೂ ನನ್ನೊಂದಿಗೆ ಯುವ ಮುಖಂಡರಾದ ಶಿವಕುಮಾರ ದಡ್ಡೂರ ಅವರನ್ನು ಏಕಾಏಕಿ ರೋಣ ಮಂಡಲದ ಪ್ರಧಾನ ಕಾರ್ಯದರ್ಶಿಯಾದ ರಮೇಶ ವಕ್ಕರ ಅವರು ಉಚ್ಛಾಟನೆ ಮಾಡಿರುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದು, ಯಾವ ಕಾರಣಕ್ಕಾಗಿ ನಮ್ಮನ್ನು ಉಚ್ಛಾಟಿಸಲಾಗಿದೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ರೋಣ ಮತಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಸ್ವಾತಂತ್ರ್ಯ ಇಲ್ಲವಾಗಿದೆ, ಏಕಚಕ್ರಾದಿಪತ್ಯ ನಡೆಯುತ್ತಿದೆ. ಮಾಜಿ ಸಚಿವರಾದ ಕಳಕಪ್ಪ ಬಂಡಿಯವರು ಪಾರ್ಟಿಯಲ್ಲಿ ಯಾರನ್ನು ಬೆಳೆಯಲು ಅವಕಾಶ ನೀಡುತ್ತಿಲ್ಲ, ಈ ಹಿಂದೆ ಕೂಡಾ ಹಲವು ಬಾರಿ ನನ್ನನ್ನು ವಿನಾಕಾರಣ ಹುದ್ದೆಯಿಂದ ತಗೆಯಲಾಗಿದೆ. ಈಗ ಕೂಡಾ ಯಾವ ಕಾರಣವೂ ಇಲ್ಲದೇ ವಿನಾಕಾರಣ ಉಚ್ಛಾಟನೆ ಮಾಡಲಾಗಿದೆ, ಇದರ ಹಿಂದೆ ಕಳಕಪ್ಪ ಬಂಡಿಯವರ ಷಡ್ಯಂತ್ರ ಖಂಡಿತ ಇದೆ ಎಂದು ಆರೋಪಿಸಿದರು.
ಈ ಕುರಿತು ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ ಅವರನ್ನು ಪ್ರಶ್ನಿಸಿದಾಗ ಈ ಕುರಿತು ಅವರ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಕಾರಣ ಜಿಲ್ಲಾಧ್ಯಕ್ಷರು ಕೂಡಲೇ ಈ ವಿಷಯ ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಸರಿಪಡಿಸಬೇಕು ಎಂದು ಕೋರಿದರು.
ಬಿಜೆಪಿಯ ಮುಖಂಡರಾದ ಶಿವಕುಮಾರ ದಡ್ಡೂರ ಅವರು ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆ ಮಾಡದೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದವರನ್ನು ಉಚ್ಛಾಟನೆ ಮಾಡಿದ್ದು ಯಾವ ನ್ಯಾಯ, ಉಟ್ಛಾಟನೆ ಮಾಡಲು ಇವರು ಯಾರು? ಇವರಿಗೆ ಆ ಅಧಿಕಾರ ಕೊಟ್ಟವರು ಯಾರು?
ಇದು ಖಂಡಿತ ದುರುದ್ದೇಶದ ಕ್ರಮ. ಕ್ಷೇತ್ರದಲ್ಲಿ ನಮ್ಮ ಏಳಿಗೆ ಸಹಿಸದೇ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ಕಾರಡಗಿಮಠ ಹಾಗೂ ಅರುಣಕುಮಾರ ಮಠದ ಉಪಸ್ಥಿತರಿದ್ದರು.
ದಿವಂಗತ ಚನ್ನು ಪಾಟೀಲ ಫೌಂಡೇಶನ್ನಿನ ಮೂಲಕ ಜನಪರ ಕಾರ್ಯಕ್ರಮ ಮಾಡುತ್ತ, ಜೊತೆಗೆ ಬಿಜೆಪಿಯ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ನಾನು ರೋಣ ಮತಕ್ಷೇತ್ರದ ಟಿಕೇಟ ಆಕಾಂಕ್ಷಿ ಎಂದು ಎಲ್ಲಿಯೂ ಹೇಳಿಲ್ಲ, ಕ್ಷೇತ್ರದಲ್ಲಿ ಜನಪರ ಕಾರ್ಯಕ್ರಮಗಳ ಮೂಲಕ ಸೇವೆ ಸಲ್ಲಿಸುತ್ತಿರುವ ನಮ್ಮ ಬೆಳವಣಿಗೆ ಸಹಿಸದೇ ಕಳಕಪ್ಪ ಬಂಡಿಯವರ ಷಡ್ಯಂತ್ರದಿಂದ ಶಿಸ್ತು ಸಮಿತಿಯಲ್ಲಿ ಚರ್ಚಿಸದೇ, ನೋಟೀಸ್ ಕೂಡಾ ನೀಡದೇ ಪಕ್ಷದಿಂದ ನಮ್ಮನ್ನು ಉಚ್ಛಾಟಿಸಲಾಗಿದೆ. ಕೂಡಲೇ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ ಅವರು ಈ ವಿಷಯ ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಸರಿಪಡಿಸಬೇಕು.
= ಉಮೇಶ ಚನ್ನು ಪಾಟೀಲ, ಯುವ ಮುಖಂಡರು, ರೋಣ