ಮೂಡಲಗಿ : ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಸಾರ್ವಜನಿಕ ಗಣೇಶ ಮಂಡಳಿಯಾದ ವಿದ್ಯಾನಗರದ ಶ್ರೀ ಗಜಾನನ ಯುವಕ ಮಂಡಳಿಯವರು, ಮಣ್ಣಿನ ಗಣಪನನ್ನು ಪ್ರತಿ?ಪಿಸುವ ಜೊತೆಗೆ ಏಳು ದಿನಗಳ ಕಾಲ ಗಣೇಶ ಹಬ್ಬದ ಆಚರಣೆನ್ನೂ ಕೂಡ ಪರಿಸರ ಸ್ನೇಹಿಯಾಗಿಯೇ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಯುವಕ ಮಂಡಳಿಯವರು ಗಣೇಶ ಚತುರ್ಥಿ ಅಂಗವಾಗಿ ಮಣ್ಣಿನ ಗಣಪತಿಯನ್ನು ಕರೆತರುವ ದಿನದಿಂದ ಹಿಡಿದು ವಿಸರ್ಜಿಸುವ ಮೆರವಣಿಗೆಯಲ್ಲಿ ಕೂಡ ವಾಯು ಹಾಗೂ ಶಬ್ಧ ಮಾಲಿನ್ಯಕ್ಕೆ ಕಾರಣವಾದ ಯಾವುದೇ ಪಟಾಕಿಗಳನ್ನು ಸಿಡಿಸದೇ, ಡಿಜೆ ಸಂಗೀತವನ್ನೂ ಬಳಸಲಿಲ್ಲ. ಕೇವಲ ದೇಸಿ ವಾದ್ಯಗಳನ್ನು ನುಡಿಸುವುದರೊಂದಿಗೆ ಯುವಕ ಮಂಡಳಿಯ ಸದಸ್ಯರು ಹಾಗೂ ಸಮಸ್ತ ವಿದ್ಯಾನಗರ ನಿವಾಸಿಗಳು ಗಣೇಶನ ಸ್ತುತಿಗಳನ್ನು ಹಾಡುವುದರೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸಮಾಜಕ್ಕೆ ಒಳ್ಳೆ ಸಂದೇಶ ಸಾರುವುದರ ಮೂಲಕ ಸದ್ದು ಮಾಡಿದರು. ಏಳು ದಿನಗಳ ಕಾಲ ಸಾಗಿದ ಈ ಗಣೇಶನ ಹಬ್ಬದಲ್ಲಿ, ಪ್ರತಿದಿನ ಸಾಯಂಕಾಲ ಪ್ರವಚನ ಕಾರ್ಯಕ್ರಮದೊಂದಿಗೆ, ಅನ್ನ ಪ್ರಸಾದವು ಜರುಗಿ, ಮಹಿಳೆ ಹಾಗೂ ಮಕ್ಕಳಿಗೆ ಕ್ರೀಡೆಗಳನ್ನು ಕೂಡ ಆಯೋಜಿಸಿ ಸಾಮರಸ್ಯ ಮೂಡಿಸಲಾಯಿತು. ಸೌಹಾರ್ದತೆಗೆ ಹೆಸರಾಗಿರುವ ವಿದ್ಯಾನಗರದ ಮುಸಲ್ಮಾನ ಬಾಂಧವರು ಗಣಪತಿಗೆ ಅಭಿ?ಕ, ಅನ್ನ ಪ್ರಸಾದದ ಆಯೋಜನೆ ಹಾಗೂ ಶ್ರೀ ಫಲಗಳ ಸವಾಲು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಭಾವೈಕ್ಯತೆ ಮೆರೆದರು.
ಪ್ರಜ್ಞಾವಂತರಾದ ಮೂಡಲಗಿಯ ವಿದ್ಯಾನಗರದ ಶ್ರೀ ಗಜಾನನ ಯುವಕ ಮಂಡಳಿಯವರು, ಸಣ್ಣ ಗಲಭೆಗೂ ಆಸ್ಪದ ಕೊಡದೇ ಸರ್ವ ಧರ್ಮರೊಂದುಗೂಡಿ ಸಾಮಾಜಿಕ ಜಾಗೃತಿಗಾಗಿ ನಿಸರ್ಗದ ಮಾದರಿಯ ಮಂಟಪ ಮಾಡಿ, ಭಕ್ತಿಯಿಂದ ಮಣ್ಣಿನ ಗಣಪನನ್ನು ಕೂಡಿಸುವುದರ ಮೂಲಕ ಪರಿಸರಸ್ನೇಹಿಯಾಗಿಯೇ ಗಣೇಶನ ಹಬ್ಬವನ್ನು ಆಚರಿಸಿದ್ದು, ಮೂಡಲಗಿ ತಾಲೂಕಾ ಆಡಳಿತ ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.