ಬೆಳಗಾವಿ, ನವೆಂಬರ್ 4(ಕರ್ನಾಟಕ ವಾರ್ತೆ ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸೊಸೈಟಿ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ (ನ.4)ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯದಲ್ಲಿ ಜಿಲ್ಲಾ ಮಟ್ಟದ ಕಲಾಶ್ರೀ ಪ್ರಶಸ್ತಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆ.ಎನ್. ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಿಗೆ ಪಠ್ಯದ ಜೊತೆಗೆ ಸೃಜನಾತ್ಮಕ ಚಟುವಟಿಕೆಗಳು ಅತ್ಯಂತ ಅವಶ್ಯಕವಾಗಿವೆ. ಮಕ್ಕಳಲ್ಲಿರುವ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಹೊರತರಲು ಬಾಲಭವನ ಸೊಸೈಟಿಯ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತಿವೆ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಮಟ್ಟದ ಮಕ್ಕಳಿಗೂ ತಲುಪುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಂ.ಎನ್. ಚೇತನ್ ಕುಮಾರ್ ಅವರು, ಪ್ರತಿವರ್ಷದಂತೆ ಈ ವರ್ಷವೂ 9ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಐದು ವಿಭಾಗಗಳಲ್ಲಿ ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಮಕ್ಕಳನ್ನು ರಾಜ್ಯ ಬಾಲಭವನ ಸೊಸೈಟಿ, ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಮಟ್ಟದ ಐದು ವಿಭಾಗಗಳ ಸ್ಪರ್ಧೆಗಳಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಕ್ಕಳ ವಿವರ:
ಸೃಜನಾತ್ಮಕ ಪ್ರದರ್ಶನ ಕಲೆ ಪ್ರಥಮ ಸ್ಥಾನ – ಕುಮಾರಿ ವಸುಂದರ ಬಾಕಳೆ, ದ್ವಿತೀಯ ಸ್ಥಾನ – ಕುಮಾರಿ ಖುಷಿ ಜಗಜಂಪಿ. ಸೃಜನಾತ್ಮಕ ಬರವಣಿಗೆ ಕಲೆ ಪ್ರಥಮ ಸ್ಥಾನ ಕುಮಾರಿ ಅಶ್ವಿನಿ ಶೇಕೆ, ದ್ವಿತೀಯ ಸ್ಥಾನ ಕುಮಾರಿ ಆಯಿಜಲ ಮುಲ್ಲಾ. ಸೃಜನಾತ್ಮಕ ಕಲೆ ಪ್ರಥಮ ಸ್ಥಾನ ಕುಮಾರ ಪ್ರಜ್ವಲ್ ಸುರಣ್ಣವರ್, ದ್ವಿತೀಯ ಸ್ಥಾನ ಕುಮಾರ ಸಾಗರ್ ರಕ್ಷಿ.
ವಿಜ್ಞಾನದಲ್ಲಿ ನೂತನ ಆವಿಷ್ಕಾರ ಪ್ರಥಮ ಸ್ಥಾನ – ಕುಮಾರಿ ಶಿಲ್ಪಾ ಮಕ್ಕಳಗೇರಿ ಹಾಗೂ ಕುಮಾರಿ ಭಾಗ್ಯಶ್ರೀ ಹಣಮಣ್ಣವರ, ದ್ವಿತೀಯ ಸ್ಥಾನ – ಕುಮಾರ ಮಲ್ಲಿಕಾರ್ಜುನ ಪೂಜಾರಿ.
ವಿಶೇಷ ಚೇತನ ಮಕ್ಕಳ ವಿಭಾಗ ಪ್ರಥಮ ಸ್ಥಾನ – ಕುಮಾರ ವಿವೇಕ್ ಸುಂಟಕ್ಕಿ, ದ್ವಿತೀಯ ಸ್ಥಾನ ಕುಮಾರ ಮಹಾದೇವ ಸುತಗಟ್ಟಿ.
ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಹೆಗಡೆ ಅವರು ಸ್ವಾಗತಿಸಿದರು. ಶಿಲ್ಪಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಮೂರ್ತಿ ಕೆ.ವಿ., ಬೆಳಗಾವಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನಿಲ್ ಕಾಂಬಳೆ, ಬೆಳಗಾವಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಕ್ರಮ್ ಕೆ.ಬಿ. ಸೇರಿದಂತೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.