ಬಳ್ಳಾರಿ. ನ. 05 : ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬಳ್ಳಾರಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ್ದು ನಗರದ ಸಾರಿಗೆ ಇಲಾಖೆ ಭೂ ಮಾಪನ ಇಲಾಖೆ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದರು. ಈ ತನಿಖೆಯ ವೇಳೆ ಮಹತ್ವದ ವಿವರಗಳನ್ನು ಸಂಗ್ರಹಿಸಿದ ಲೋಕಾಯುಕ್ತ ಅಧಿಕಾರಿಗಳು ಸಂಬಂಧಿಸಿದೆ ಇಲಾಖೆಯ ಅಧಿಕಾರಿಗಳನ್ನು ಕುಲಂಕುಶವಾಗಿ ವಿಚಾರಣೆ ನಡೆಸಿದರು.
ಸುಮಾರು ಆರು ತಂಡಗಳಲ್ಲಿ ಬಳ್ಳಾರಿ ಜಿಲ್ಲೆಗೆ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಬಳ್ಳಾರಿ ನಗರದಲ್ಲಿ ಎರಡು ತಂಡ ಮತ್ತು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಾಲ್ಕು ತಂಡಗಳಾಗಿ ವಿಭಾಗಿಸಿ ವಿವಿಧ ಇಲಾಖೆಗಳ ಮೇಲೆ ದಾಳಿಯನ್ನು ನಡೆಸಿದರು. ಅದೇ ಪ್ರಕಾರ ಸಂಜೆ ಮೂರು ಗಂಟೆಗೆ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಸರ್ವೆ ಇಲಾಖೆಯ ಕಚೇರಿಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಸುಮಾರು 3 ಗಂಟೆಗಳ ಕಾಲ ವಿವಿಧ ಕಡತಗಳನ್ನು ಪರಿಶೀಲಿಸಿ ಮಹತ್ವದ ವಿವರಗಳನ್ನು ಸಂಗ್ರಹಿಸಿದರು ಎನ್ನಲಾಗಿದೆ.
ಲೋಕಾಯುಕ್ತ ಅಧಿಕಾರಿಗಳ ದಾಳಿ ಇಂದು ಸಹ ಜಿಲ್ಲಾ ಕೇಂದ್ರದ ವಿವಿಧ ಇಲಾಖೆಗಳ ಕಚೇರಿ ಮೇಲೆ ದಾಳಿ ಮಾಡುವ ಸಾಧ್ಯತೆ ಇದ್ದು ಎಲ್ಲಾ ಇಲಾಖೆಯ ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳ ತನಿಖೆಯನ್ನು ಎದುರಿಸುವ ದಾಖಲೆಗಳನ್ನು ಸಂಗ್ರಹಿಸಿಕೊಂಡು ಬದ್ಧವಾಗಿದ್ದಾರೆ ಮತ್ತು ಇಲಾಖೆಗಳಲ್ಲಿ ದೋಷಪೂರಿತವಾದ ಆಡಳಿತವುಳ್ಳ ಅಧಿಕಾರಿಗಳು ಗಾಬರಿಗೊಂಡಿದ್ದಾರೆ.