ಬೆಳಗಾವಿ, ಜುಲೈ 18(ಕರ್ನಾಟಕ ವಾರ್ತೆ): ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಂಗೀತಾಭ್ಯಾಸ ಮಾಡಿದರೆ ಬೌದ್ಧಿಕ ಮಟ್ಟವೂ ಹೆಚ್ಚಾಗಿ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಪರಿಶಿಷ್ಟ ಪಂಗಡದ ಯರಗಟ್ಟಿ ತಾಲೂಕಾ ಕಲ್ಯಾಣಾಧಿಕಾರಿಗಳಾದ ಆರ್.ಆರ್.ಕುಲಕರ್ಣಿ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ವರ್ಗಗಗಳ ಕಲ್ಯಾಣ ಇಲಾಖೆ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಯರಗಟ್ಟಿಯಲ್ಲಿ ಶನಿವಾರ ಜೂ.೧೮ ರಂದು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಸಂಗೀತ ಕಲಿಕಾ ತರಬೇತಿ ಕಾರ್ಯಕ್ರಮದ ಉದ್ಘಾಟನೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನುಷ್ಯ ಹುಟ್ಟಿನಿಂದ ಇಹಲೋಕ ಸೇರುವ ತವಕ ಆತನಿಗೆ ಸಂಗೀತದ ಅವಶ್ಯಕತೆ ಇರುತ್ತದೆ. ಸಂಗೀತವೆಂಬುದು ಕೇವಲ ಹಾಡಲ್ಲ ಅದು ಒಂದು ಜೀವನದ ಪದ್ದತಿಯಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು, ಎಲ್ಲ ಮಕ್ಕಳ ಕಣ್ಣುಗಳಲ್ಲಿ ಸಂಗೀತ ಕಲಿತು ಸಾಧನೆ ಮಾಡುವ ಹುಮ್ಮಸ್ಸು ಕಾನುತ್ತಿದೆ ಎಂದು ಹೇಳಿದರು.
ಸಂಗೀತದಲ್ಲಿ ಆಸಕ್ತಿ ಇರುವ ಎಲ್ಲ ಮಕ್ಕಳು ಸಂಗೀತ ವನ್ನು ತಾಳ ವಾದ್ಯಗಳ ಮೂಲಕ ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಎಷ್ಟೋ ಮಕ್ಕಳಿಗೆ ಸಂಗೀತವನ್ನು ತಮ್ಮ ಮನೆಯ ಬಡತನ ಪರಿಸ್ಥಿತಿಯಿಂದ ಕಲಿಯಲು ಆಗುತ್ತಿಲ್ಲ ಅದಕ್ಕಾಗಿ ಅಂತಹ ಮಕ್ಕಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಎಲ್ಲಾ ಮಕ್ಕಳಿಗೂ ಸಂಗೀತವನ್ನು ಒದಗಿಸುವ ಕಾರ್ಯ ಮಾಡುತ್ತಿದೆ ಎಂದರು.
ತರಬೇತಿಯ ಉಪಯೋಗವನ್ನು ಪ್ರತಿಯೊಂದು ಮಕ್ಕಳು ಪಡೆದುಕೊಳ್ಳಬೇಕು. ನಮ್ಮ ಜೀವನಕ್ಕೆ ಸಂಸ್ಕಾರವನ್ನು ನೀಡುವಂತ ಸಂಗೀತವನ್ನು ಎಲ್ಲರೂ ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುನ್ನು ಹೇಳಿದರು.
ಸಂಗೀತ ಲೋಕ ಬಹಳ ವಿಶಾಲವಾಗಿದೆ ಸಂಗೀತ ಕಲಿಯುವ ಮತ್ತು ಕಲಿಸುವ ದೊಡ್ಡ ಪರಂಪರೆ ನಮ್ಮ ಇಲಾಖೆಯಲ್ಲಿದೆ ಎಂದರು.
ಸಂಗೀತಕ್ಕೆ ತನ್ನದೇಯಾದ ಭಾವನೆಗಳಿವೆ ಅದು ವ್ಯಕ್ತಿ ಖುಸಿಯಾಗಿದ್ದಾಗ ಬರುವ ಭಾವನೆಗಳೇ ಬೇರೆ ಹಾಗೂ ವ್ಯಕ್ತಿ ದು:ಖದಲ್ಲಿದ್ದಾಗ ಬರುವ ಭಾವನೆಗಳೇ ಬೇರೆ ಹಾಗಾಗಿ ಸಂಗೀತವನ್ನು ಖುಸಿಯಾಗಿರುವುದಕ್ಕೆ ಬಳಸಿಕೊಳ್ಳಿ ಎಂದು ವಿದ್ಯಾವತಿ ಭಜಂತ್ರಿ ಅವರು ಮಕ್ಕಳಿಗೆ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಯರಗಟ್ಟಿಯ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕರಾದ ಆಶಾ ಪರೀಟ ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.