ಬೆಳಗಾವಿ, ಏಪ್ರಿಲ್ 23:
ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ರವಿವಾರ ದಿನಾಂಕ 26 ರಂದು ಬೆಳಗಾವಿಯಲ್ಲಿ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿಯ ಸಂಚಾಲಕ ಬಸವರಾಜ್ ರೊಟ್ಟಿ ಹೇಳಿದರು.
ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡಿದ ಅವರು ಸಂಜೆ 4 ಗಂಟೆಗೆ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾಗುವ ಮೆರವಣಿಗೆಯಲ್ಲಿ ಬಸವಣ್ಣನವರ ಮೂರ್ತಿ ಹೊತ್ತುಕೊಂಡ ಡಿಜಿಟಲ್ ಆನೆ ಮೆರವಣಿಗೆಯ ವಿಶೇಷ ಆಕರ್ಷಣೆ ಆಗಲಿದೆ. ಪಲ್ಲಕ್ಕಿಯಲ್ಲಿ ವಚನ ಕಟ್ಟುಗಳ ಮೆರವಣಿಗೆ, ಉಡುಪಿಯ ಚಂಡೆ ಮದ್ದಳೆ ಕಲಾವಿದರ ಪ್ರದರ್ಶನ, ಮಾದನಭಾವಿಯ(ಧಾರವಾಡ) 40 ಜನರ ತಂಡದಿಂದ ಕೋಲಾಟ ವಚನಾಧಾರಿತ ಪ್ರದರ್ಶನ, ವಿವಿಧ ಮಹಿಳಾ ಸಂಘಟನೆಗಳ 60 ಜನ ಸದಸ್ಯರಿಂದ ವಚನಾಧಾರಿತ ನೃತ್ಯ ಕಾರ್ಯಕ್ರಮ, ದಾವಣಗೆರೆಯ ಬಸವ ಲೋಕ ಭಜನಾ ಮಂಡಳಿಯಿಂದ ಪ್ರದರ್ಶನ, ವಿವಿಧ ಸಂಘ ಸಂಸ್ಥೆಗಳಿಂದ ರೂಪಕ ವಾಹನಗಳು ಮತ್ತು ವಿವಿಧ ಸಾಂಸ್ಕೃತಿಕ ವೇಷಧಾರಿಗಳು ಮೆರವಣಿಗೆಯಲ್ಲಿರಲಿವೆ. ಶಾಸಕರು, ಸಂಸದರು, ನಗರ ಸೇವಕರು ಹಾಗೂ ಎಲ್ಲ ಬಸವಪರ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ. ಮೆರವಣಿಗೆಯು ಕಾಕತಿ ವೇಸ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ರಾಮದೇವ್ ಗಲ್ಲಿ, ಕಾಲೇಜ್ ರೋಡ್ ಮುಂತಾದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಲಿಂಗರಾಜ್ ಕಾಲೇಜಿನ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ. ಮೆರವಣಿಗೆಯಲ್ಲಿ ಮಹಿಳಾ ಘಟಕಗಳು, ಯುವಕ ಸಂಘಟನೆಗಳ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದರೊಂದಿಗೆ ವಿಶೇಷ ಆಕರ್ಷಣೆಯಾಗಿ ಲಿಂಗರಾಜ ಕಾಲೇಜ್ ಆವರಣದಲ್ಲಿ ಲೇಸರ್ ಶೋ, ಕ್ರ್ಯಾಕರ್ ಶೋ ಸೇರಿದಂತೆ ವಿವಿಧ ಆಕರ್ಷಕ ಕಾರ್ಯಕ್ರಮಗಳು ನಡೆಯಲಿವೆ.
ಜಯಂತಿ ಅಂಗವಾಗಿ ಬಸವೇಶ್ವರರ ಸಮಾನತೆ, ಶ್ರಮ ಹಾಗೂ ನೈತಿಕ ಮೌಲ್ಯಗಳ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಪೂಜೆ, ಅಭಿಷೇಕ, ಮೆರವಣಿಗೆ ಹಾಗೂ ಬಸವಾದಿ ಶರಣರ ಆಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಬೆಳಿಗ್ಗೆ ವಿಶೇಷ ಪೂಜೆ ಮತ್ತಿತರ ಕಾರ್ಯಕ್ರಮಗಳು ನೆರವೇರಲಿವೆ.
ಮೆರವಣಿಗೆ ಬಳಿಕ ಲಿಂಗರಾಜ್ ಕಾಲೇಜು ಮೈದಾನದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ ಬಸವ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ಬಸವಣ್ಣನವರ ಜೀವನ, ತತ್ವ ಹಾಗೂ ಸಂದೇಶಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾ ಪರಿಷತ್ತಿನಲ್ಲಿ ಮುರುಗೇಂದ್ರಗೌಡ ಪಾಟೀಲ, ಅಶೋಕ್ ಮಳಗಲಿ, ಈರಣ್ಣ ದಯಣ್ಣವರ್ , ಶಂಕರ್ ಗುಡಸ್, ಮನೋಹರ ಪಡುಕಲಕಟ್ಟಿ, ರಮೇಶ್ ತುಬಚಿ, ಮುರುಗೆಪ್ಪ ಬಾಳಿ, ಮಾಂತೇಶ್ ಗುಡಸ್, ಕೆ. ಶರಣ ಪ್ರಸಾದ್, ಆನಂದ್ ಗುಡಸ ಸೇರಿದಂತೆ ಇತರರು ಇದ್ದರು.