ಮುದ್ದೇಬಿಹಾಳ: ತಾಲ್ಲೂಕಿನ ಚವನಭಾವಿ ಗ್ರಾಮದ ವ್ಯಾಪ್ತಿಯಲ್ಲಿ ರೈತರ ಜಮೀನುಗಳಿಗೆ ನೀರು ಪೂರೈಸುವ ಎಎಲ್‌ಬಿಸಿ ಕಾಲುವೆ (ಡಿಸ್ಟ್ರಿಬ್ಯೂಟರ್-39) ನಿರ್ವಹಣೆ ಕೊರತೆಯಿಂದ ಸಂಪೂರ್ಣ ಅವ್ಯವಸ್ಥೆಗೊಂಡಿದ್ದು, ಕಾಲುವೆಯಲ್ಲಿ ಹೂಳು, ಕಸ, ಕಲ್ಲುಗಳು ಹಾಗೂ ಮುಳ್ಳಿನ ಗಿಡಗಂಟಿಗಳು ಬೆಳೆದು ನೀರು ಸರಾಗವಾಗಿ ಹರಿಯದಂತಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ತಾಲ್ಲೂಕಿನ ನಾಲತವಾಡ, ಅರೇಶಂಕರ, ಕಮಲಾಪುರ, ಎಣ್ಣಿವಡಗೇರಿ ಮಾರ್ಗವಾಗಿ ಚವನಭಾವಿ ಗ್ರಾಮದ ರೈತರ ಜಮೀನುಗಳಿಗೆ ನೀರು ಪೂರೈಸುವ ಈ ನೀರಾವರಿ ಕಾಲುವೆಯ ಹಲವು ಭಾಗಗಳಲ್ಲಿ ಮಣ್ಣು, ಸಣ್ಣ-ದೊಡ್ಡ ಕಲ್ಲುಗಳು ಆಪು ಹುಲ್ಲು ಬೆಳೆದು ನಿಂತಿವೆ. ಹಾಗೂ ಗಿಡಗಂಟಿಗಳು ಸಂಗ್ರಹಗೊಂಡಿವೆ. ಸುಮಾರು ಐದು ವರ್ಷಗಳಿಂದ ಕಾಲುವೆಯ ಹೂಳು ಎತ್ತುವ ಕಾರ್ಯ ನಡೆದಿಲ್ಲ ಎಂದು ರೈತರು ದೂರಿದ್ದಾರೆ.
ಪ್ರಸ್ತುತ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತರು ಅಲ್ಪಸ್ವಲ್ಪ ಬೆಳೆಗಳನ್ನು ಬೆಳೆದಿದ್ದು, ಅವುಗಳಿಗೆ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಸರ್ಕಾರದ ಆದೇಶದಂತೆ ಕಾಲುವೆಗೆ ನೀರು ಹರಿಸಲಾಗುತ್ತಿದ್ದರೂ, ಹೂಳು ಹಾಗೂ ಗಿಡಗಂಟಿಗಳಿಂದಾಗಿ ನೀರು ಚವನಭಾವಿ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಇದರಿಂದ ಬೆಳೆಗಳು ಒಣಗುವ ಆತಂಕ ರೈತರಲ್ಲಿ ಎದುರಾಗಿದೆ.

ಕಾಲುವೆ ನೀರನ್ನೇ ಅವಲಂಬಿಸಿರುವ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಾವರಿ ಕಾಲುವೆಯನ್ನು ಸಮರ್ಪಕವಾಗಿ ನಿರ್ವಹಿಸದೆ ರೈತರ ಸಂಕಷ್ಟಕ್ಕೆ ಕಾರಣವಾಗಿರುವ ಕೆಬಿಜೆಎನ್‌ಎಲ್ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕಾಲುವೆಯಲ್ಲಿರುವ ಹೂಳು, ಕಸ, ಕಲ್ಲು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಿ ಚವನಭಾವಿ ಗ್ರಾಮದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಇಲ್ಲದಿದ್ದರೆ ಕೆಬಿಜೆಎನ್‌ಎಲ್ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಲ್ಲಪ್ಪ ಮಾಲಿನ, ಅಂಬ್ರೇಶ ನಾಲತವಾಡ, ಸಿದ್ದಪ್ಪ ಗುರಿಕಾರ, ಸಿದ್ದಪ್ಪ ಚಲವಾದಿ, ಹಣಮಂತ ಗೋಗಿ, ಲಕ್ಷ್ಮಣ ಈಳಗೇರ, ಶಿವಪ್ಪ ಕಾರಕೂರ, ಹಣಮಂತ ನಾಲತವಾಡ, ಯಮನಪ್ಪ ಬಿರಾದಾರ, ಸಂಗಪ್ಪ ಕುಂಬಾರ, ಗದ್ದೆಪ್ಪ ನಾಲತವಾಡ, ಲಕ್ಕಪ್ಪ ನಾಲತವಾಡ, ಮೌನೇಶ ಬಿರಾದಾರ, ಜಕ್ಕಪ್ಪ ನಾಲತವಾಡ, ಯಮನಪ್ಪ ಚಲವಾದಿ, ಭೀರಪ್ಪ ಮದರಿ, ಶಂಕ್ರಯ್ಯ ಹಿರೇಮಠ, ಶಿವಪ್ಪ ಮದರಿ ಸೇರಿದಂತೆ ಹಲವು ರೈತರು ಇದ್ದರು.