ಕೊಪ್ಪಳ, ಆ. 31: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ದಲಿತರು ಹಾಗೂ ಶೋಷಿತ ಸಮುದಾಯಗಳಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂದು ವಿಧಾನಪರಿಷತ್ತಿನ ಸದಸ್ಯರು ಹಾಗೂ ಬಿಜೆಪಿ ಮಹಿಳಾ ಮುಖಂಡರಾದ ಹೇಮಲತಾ ನಾಯಕ್ ಗಂಭೀರ ಆರೋಪ ಮಾಡಿದ್ದಾರೆ.
ಅವರು ಸೋಮವಾರ ಇಲ್ಲಿನ ಪತ್ರಿಕಾ ಭವನ ದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ
ವಾಲ್ಮೀಕಿ ನಿಗಮದ ಹಗರಣ, ಮೀಸಲಾತಿ ಕಡಿತ ಹಾಗೂ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನದ ದುರ್ಬಳಕೆಯನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಮುಂದುವರೆದು ಮಾತನಾಡಿ ಜಿಲ್ಲೆಯ ಕನಕಗಿರಿ ಕಾರಟಗಿ ಮತ್ತು ಗಂಗಾವತಿ ಭಾಗದಿಂದ ಕಾಂಗ್ರೆಸ್ ವಿರುದ್ಧ ಬಿಜೆಪಿ ಯಿಂದ ಬಳ್ಳಾರಿ ಚಲೋ ಎಂಬ ಪ್ರತಿಭಟನಾ ಪಾದಯಾತ್ರೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು,
*ವಾಲ್ಮೀಕಿ ಅಭಿವೃದ್ಧಿ ನಿಗಮದ ರೂ. 187 ಕೋಟಿ ಹಗರಣ:* ನಿಗಮದ ಹಗರಣದ ಪ್ರಮುಖ ರೂವಾರಿ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಂಡಿದ್ದನ್ನು ವಿರೋಧಿಸಿ ಬಿಜೆಪಿ ನಡೆಸಿದ ನಿರಂತರ ಹೋರಾಟಕ್ಕೆ ಮಣಿದು ಅವರು ರಾಜೀನಾಮೆ ನೀಡಿದ್ದಾರೆ. ಇದು ಹೋರಾಟಕ್ಕೆ ಸಿಕ್ಕ ಮೊದಲ ಜಯವಾಗಿದ್ದು, ಲೂಟಿಯಾಗಿರುವ ರೂ. 187 ಕೋಟಿ ಹಣವನ್ನು ನಿಗಮದ ಖಾತೆಗೆ ಮರು ಜಮೆ ಮಾಡುವವರೆಗೂ ಜನಾಂದೋಲನ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
*ದಲಿತರ ಮೀಸಲಾತಿ ಕಸಿದುಕೊಂಡ ಆರೋಪ:* ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿ (ಎಸ್ ಸಿ) ಮೀಸಲಾತಿಯನ್ನು 17% ಕ್ಕೆ ಹಾಗೂ ಪರಿಶಿಷ್ಟ ಪಂಗಡದ (ಎಸ್ ಟಿ) ಮೀಸಲಾತಿಯನ್ನು 7% ಕ್ಕೆ ಹೆಚ್ಚಿಸಿತ್ತು. ಆದರೆ, ಹಾಲಿ ಕಾಂಗ್ರೆಸ್ ಸರ್ಕಾರವು ಇದನ್ನು ಕ್ರಮವಾಗಿ 15% ಹಾಗೂ 3% ಕ್ಕೆ ಇಳಿಸುವ ಮೂಲಕ ಶೋಷಿತ ಸಮುದಾಯಗಳಿಗೆ ನೇರ ದ್ರೋಹ ಎಸಗಿದೆ ಎಂದು ಆಪಾದಿಸಿದೆ. ಹೆಚ್ಚಿಸಲಾದ ಮೀಸಲಾತಿ ಹಕ್ಕು ಸಮುದಾಯಕ್ಕೆ ತಲುಪುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
*ಎಸ್‌ಸಿಎಸ್‌ಪಿ-ಟಿಎಸ್‌ಪಿ ರೂ. 53,926 ಕೋಟಿ ಅನುದಾನ ದುರ್ಬಳಕೆ:* ಪರಿಶಿಷ್ಟರ ಏಳಿಗೆಗೆ ಮೀಸಲಾಗಿದ್ದ ಎಸ್‌ಸಿಎಸ್‌ಪಿ-ಟಿಎಸ್‌ಪಿ ನಿಧಿಯಿಂದ ಕಾಂಗ್ರೆಸ್ ಸರ್ಕಾರವು ತನ್ನ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಗೆ ಸುಮಾರು ರೂ. 53,926.46 ಕೋಟಿ (2023-24ರಲ್ಲಿ ರೂ. 11,144 ಕೋಟಿ, 2024-25ರಲ್ಲಿ ರೂ. 14,283 ಕೋಟಿ, 2025-26ರಲ್ಲಿ ರೂ. 13,433 ಕೋಟಿ ಹಾಗೂ 2026-27ರಲ್ಲಿ ರೂ. 15,066.46 ಕೋಟಿ) ಹಣವನ್ನು ಮರುಹಂಚಿಕೆ ಮಾಡುವ ಮೂಲಕ ದಲಿತರ ಅಭಿವೃದ್ಧಿಗೆ ಕಲ್ಲು ಹಾಕಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ ಎಂದು ವಿವರಿಸಿದರು,
ದಲಿತ ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಸರ್ಕಾರದ ದುರಾಡಳಿತದ ವಿರುದ್ಧ ಬಿಜೆಪಿ ತನ್ನ ನಿರಂತರ ಹೋರಾಟವನ್ನು ರಾಜ್ಯಾದ್ಯಂತ ಮುಂದುವರಿಸಲಿದೆ ಎಂದು ಬಿಜೆಪಿ ಮಹಿಳಾ ಮುಖಂಡರು ಹಾಗೂ ವಿಧಾನಪರಿಷತ್ತಿನ ಸದಸ್ಯರಾದ ಹೇಮಲತಾ ನಾಯಕ್ ರವರು ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದ್ದಾರೆ,
ಈ ಸಂದರ್ಭದಲ್ಲಿ ಅವರೊಂದಿಗೆ ಬಿಜೆಪಿ ಪಕ್ಷದ ಮಹಿಳಾ ಮುಖಂಡರಾದ ಗೀತಾ ಮುತ್ತಾಳ,ಪದಾಧಿಕಾರಿಗಳಾದ ಅಮರೇಶ್ ಮುರಡಿ, ರಾಜೀವ್ ವಸ್ತ್ರದ್ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.