ರನ್ನಬೆಳಗಲಿ, ಆ.೨೬: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ೨೦೨೫೨೬ನೇ ಸಾಲಿನಲ್ಲಿ ?೨೩.೨೧ ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸಂಘದ ಸದಸ್ಯರ ಆರ್ಥಿಕ ಪ್ರಗತಿಗೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ರೈತಪರ ಕಾರ್ಯಕ್ಕೆ ಆದ್ಯತೆ ನೀಡಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಬಸವರಾಜ ಹಿಕಡಿ ಹೇಳಿದರು.ಪಟ್ಟಣದ ಬಂದಲಕ್ಷ್ಮೀ ದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಸಂಘದ ೮೨ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.ಸಂಘದಲ್ಲಿ ಪ್ರಸ್ತುತ ೩,೫೨೪ ಸದಸ್ಯರಿದ್ದು, ?೨.೫೯ ಕೋಟಿ ಶೇರು ಬಂಡವಾಳ ಹೊಂದಿದೆ. ಸದಸ್ಯರಿಗೆ ಬೆಳೆ ಸಾಲ ಹಾಗೂ ಕೃಷಿಯೇತರ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕೆಎಂಎಫ್ ಡೇರಿಗೆ ಹಾಲು ಪೂರೈಸುವ ಹಾಗೂ ಸಂಘದಲ್ಲಿ ಬೆಳೆ ಸಾಲ ಪಡೆದಿರುವ ರೈತರಿಗೆ ಅಲ್ಪಾವಧಿ ಹೈನುಗಾರಿಕೆ ಉತ್ತೇಜನಕ್ಕಾಗಿ ೩೦ ಜನರಿಗೆ ?೮.೬೮ ಲಕ್ಷ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಅಂಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಭಾಗ್ಯಶ್ರೀ ತಳೆವಾಡ, ಅಂಕಿತಾ ಲಾಲಿಬುಡ್ಡಿ, ಕಾವೇರಿ ಡೊಳ್ಳಿ,ಸಹನಾ ಕೂಗಾಟೆ,ಅನ್ವಿತಾ ಕಲ್ಯಾಣಿ ಮತ್ತು ಸೋಹಂ ಅಂಬೂರೆ ಈ ಆರು ವಿದ್ಯಾರ್ಥಿಗಳನ್ನು ಸನ್ಮಾನಿಸಿ, ತಲಾ ?೨,೦೦೦ ಪ್ರೋತ್ಸಾಹಧನ ವಿತರಿಸಲಾಯಿತು.ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಧರೆಪ್ಪ ಸಾಂಗಲಿಕರ, "ಸಹಕಾರಿ ಸಂಘದ ಅಭಿವೃದ್ಧಿಯೇ ರೈತರ ಅಭಿವೃದ್ಧಿಗೆ ಪೂರಕವಾಗಿದೆ. ಕೃಷಿ ಚಟುವಟಿಕೆ, ಶಿಕ್ಷಣ, ಮನೆ ನಿರ್ಮಾಣ ಹಾಗೂ ಹೈನುಗಾರಿಕೆ ಸೇರಿದಂತೆ ಅಗತ್ಯ ಕಾರ್ಯಗಳಿಗೆ ಸಾಲ ಪಡೆದು, ಅದನ್ನು ಸಕಾಲದಲ್ಲಿ ಮರುಪಾವತಿಸುವ ಮೂಲಕ ಉತ್ತಮ ಗ್ರಾಹಕ ರೈತರಾಗಬೇಕು" ಎಂದು ಸಲಹೆ ನೀಡಿದರು.ಪರಮಪೂಜ್ಯ ಶ್ರೀ ಸಿದ್ದರಾಮ ಶಿವಯೋಗಿ ಸಾನ್ನಿಧ್ಯ ವಹಿಸಿ ಮಾತನಾಡಿ, "ಜೀವನ ನಿರ್ವಹಣೆಗೆ ಹಣ ಅವಶ್ಯಕ. ಜನರ ಅಗತ್ಯಗಳನ್ನು ಪೂರೈಸುವಲ್ಲಿ ಸಹಕಾರಿ ಸಂಘಗಳು ಮಹತ್ವದ ಪಾತ್ರ ವಹಿಸುತ್ತವೆ. ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತ ಮಂಡಳಿಯಿಂದ ಮಾತ್ರ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ಸಂಘದ ಅಧ್ಯಕ್ಷ ನಿಂಗಪ್ಪ ಆರೇನಾಡ ಅಧ್ಯಕ್ಷತೆ ವಹಿಸಿ ಮಾತನಾಡಿ, "ರೈತ ಬಾಂಧವರ ಅಭಿವೃದ್ಧಿಗಾಗಿ ಸದಾಕಾಲ ಶ್ರಮಿಸುತ್ತೇವೆ. ರೈತ ಬಾಂಧವರ ಸಹಕಾರ ಮತ್ತು ವಿಶ್ವಾಸವೇ ನಮ್ಮ ಸಹಕಾರಿ ಸಂಘದ ಶಕ್ತಿಯಾಗಿದೆ" ಎಂದು ಹೇಳಿದರು.ಕಾರ್ಯಕ್ರಮವನ್ನು ಯೋಗ ಶಿಕ್ಷಕ ರಾಘವೇಂದ್ರ ನೀಲನ್ನವರ ನಿರ್ವಹಿಸಿದರು.ಉಪಾಧ್ಯಕ್ಷ ಯಮನಪ್ಪ ಚಂದಪ್ಪನವರ, ನಿರ್ದೇಶಕರಾದ ಶಿವಯ್ಯ ಮೆಟಗುಡ್ಡ, ಗಿರೀಶ ಶಿರೋಳ, ಶಂಕರ ಅರೇನಾಡ, ಪರಮಾನಂದ ಸನಹಟ್ಟಿ, ರುಕ್ಕವ್ವ ಲಾಗದವರ, ಲಕ್ಷ್ಮೀ ಹುನ್ನೂರ, ಸಂತಪ್ಪ ಮಲಾವಡಿ, ಭೀಮವ್ವ ನ್ಯಾಮಗೌಡ, ಹನಮಂತ ದೊಡಹಟ್ಟಿ, ಡಿಸಿಸಿ ಬ್ಯಾಂಕ್ ಸೂಪರ್‌ವೈಸರ್ ಸವಿತಾ ಮಾರಂಗಪ್ಪನವರ, ಮುಖಂಡರಾದ ಪಂಡಿತ ಪೂಜಾರಿ, ಮಹಾಲಿಂಗಪ್ಪ ಕೊಣ್ಣೂರ ಸೇರಿದಂತೆ ಸಂಘದ ಸಿಬ್ಬಂದಿಗಳಾದ ನಿಂಗಪ್ಪ ತೋಟಗಿ, ವಿಠ್ಠಲ ಬಿರಾಜನವರ, ದ್ಯಾವಪ್ಪ ಹಾರುಗೇರಿ, ಸಾಗರ ಹೊಸೂರ, ಕರೆಪ್ಪ ಕುಂಬಾಳಿ, ಶಂಕರ ಮಡಿವಾಳ ಹಾಗೂ ಪಟ್ಟಣದ ರೈತ ಬಾಂಧವರು ಉಪಸ್ಥಿತರಿದ್ದರು.