ಮುದ್ದೇಬಿಹಾಳ: 26 ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಈ ಹಿಂದೆ ಇದ್ದ 2,28,285 ಮತದಾರರ ಪೈಕಿ 35,990 ಮತದಾರರ ಹೆಸರುಗಳನ್ನು ಕೈಬಿಡಲಾಗಿದ್ದು, ಸದ್ಯ 1,92,295 ಮತದಾರರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಮತದಾರರ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರದಲ್ಲಿ 8 ನೂತನ ಮತಗಟ್ಟೆಗಳನ್ನು ಹೆಚ್ಚಿಸಲಾಗಿದ್ದು, ಒಟ್ಟು 254 ಮತಗಟ್ಟೆಗಳಿವೆ ಎಂದು ಜಿಲ್ಲಾ ಮತದಾರರ ನೋಂದಣಿ ಅಧಿಕಾರಿ ಬಾದರುದ್ದಿನ್ ಸೌದಾಗರ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಮ್ಯಾಪಿಂಗ್ ಆಗದ 760 ಮತದಾರರು ಹಾಗೂ ಹೊಂದಾಣಿಕೆ ಇಲ್ಲದ 2,296 ಮತದಾರರಿಗೆ ನೋಟಿಸ್ ನೀಡಲಾಗುವುದು. ಈ ಕಾರ್ಯಕ್ಕಾಗಿ 10 ಜನ ಎಇಆರ್‌ಒ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಪಟ್ಟಿಯಿಂದ ಕೈಬಿಡಲಾದ 35,990 ಮತದಾರರ ಪೈಕಿ 8,858 ಮತದಾರರು ಮೃತಪಟ್ಟಿದ್ದಾರೆ. 2,937 ಮತದಾರರು ಸಂಪರ್ಕಕ್ಕೆ ಸಿಗುತ್ತಿಲ್ಲ. 19,412 ಮತದಾರರು ಕ್ಷೇತ್ರದಿಂದ ಬೇರೆ ಕ್ಷೇತ್ರಗಳಿಗೆ ಸ್ಥಳಾಂತರಗೊಂಡಿದ್ದಾರೆ. 4,760 ಮತದಾರರು ಈಗಾಗಲೇ ಮತ್ತೊಂದು ಕಡೆ ನೋಂದಾಯಿಸಿಕೊಂಡಿದ್ದಾರೆ. 23 ಮತದಾರರ ಹೆಸರುಗಳನ್ನು ಇತರೆ ಕಾರಣಗಳಿಂದ ಕೈಬಿಡಲಾಗಿದೆ ಎಂದು ವಿವರಿಸಿದರು.
ಹೆಸರು ಇಲ್ಲದವರಿಗೂ ಸರಿಪಡಿಸಿಕೊಳ್ಳಲು ಅವಕಾಶ: ಮುದ್ದೇಬಿಹಾಳ ಕ್ಷೇತ್ರದಲ್ಲಿ ವಾಸವಿದ್ದು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗಿದ್ದರೆ ಅಂತಹ ಮತದಾರರು ನಮೂನೆ-6 ಹಾಗೂ ಘೋಷಣಾ ಪತ್ರವನ್ನು ಮತದಾರರ ನೋಂದಣಿ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಿ ತಮ್ಮ ಹೆಸರನ್ನು ಮರುಸೇರಿಸಿಕೊಳ್ಳಲು ಅವಕಾಶವಿದೆ ಎಂದು ಸೌದಾಗರ ತಿಳಿಸಿದರು.
8 ನೂತನ ಮತಗಟ್ಟೆಗಳು: ಕ್ಷೇತ್ರದ ಶಿವಪೂರ, ಅಡವಿ ಹುಲಗಬಾಳ, ಮಾದಿನಾಳ, ಹುಲ್ಲೂರ, ಮುದ್ದೇಬಿಹಾಳ ಪಟ್ಟಣದ ಆಶ್ರಯ ಕಾಲೋನಿ, ಮುದ್ದೇಬಿಹಾಳ ಪಟ್ಟಣದ ಉರ್ದು ಗಂಡು ಮಕ್ಕಳ ಶಾಲೆ, ಹಿರೇಮುರಾಳ ಹಾಗೂ ಕೇಸಾಪುರದಲ್ಲಿ ತಲಾ ಒಂದರಂತೆ 8 ನೂತನ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಸಂದರ್ಭದಲ್ಲಿ ಶಿರಸ್ತೆದಾರ ಎಚ್.ಎಂ. ಶಿವಣಗಿ ಉಪಸ್ಥಿತರಿದ್ದರು.