ಮುಧೋಳ: ಆ.೨೦: ತಾಲೂಕಿನ ಸೊರಗಾಂವ ಗ್ರಾಮದ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ (ಕೆಪಿಎಸ್‌ಸಿ) ’೧೦ ಕೋಟಿ ಮಾದಕವಸ್ತು ಮುಕ್ತ ಪ್ರತಿಜ್ಞೆ’ ಎಂಬ ಮೆಗಾ ಅಭಿಯಾನವನ್ನು ಆ.೧೯ರಂದು ಹಮ್ಮಿಕೊಳ್ಳಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ಬಿ.ಆರ್. ಶಿರೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿನಿಧಿಗಳಾದ ಕುಮಾರಿ ಲಕ್ಷ್ಮಿ ಅಕ್ಕ, ಕುಮಾರ್ ಶೇಖರ್ ಅಣ್ಣ ಹಾಗೂ ಸೋಮಶೇಖರ್ ಅಣ್ಣ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಗೆ ಮಾದಕವಸ್ತುಗಳ ಸೇವನೆಯಿಂದ ಉಂಟಾಗುವ ದು?ರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು. ಮಾದಕವಸ್ತುಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ಉತ್ತಮ ಹಾಗೂ ಮಾದಕವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಪ್ರತಿಜ್ಞೆ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಯುವಜನತೆ ಮಾದಕವಸ್ತುಗಳ ವ್ಯಸನಕ್ಕೆ ಒಳಗಾಗದಂತೆ ಕುಟುಂಬ, ಶಾಲೆ ಮತ್ತು ಸಮಾಜ ಒಗ್ಗೂಡಿ ನಿರಂತರವಾಗಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಹೇಳಿದರು. ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು, ಶಿಸ್ತುಬದ್ಧ ಹಾಗೂ ಆರೋಗ್ಯಕರ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಮಾದಕವಸ್ತು ಮುಕ್ತ ಸಮಾಜ ನಿರ್ಮಾಣದ ಸಂಕಲ್ಪಕ್ಕೆ ಬೆಂಬಲ ವ್ಯಕ್ತಪಡಿಸಿದರು. ಅಭಿಯಾನವು ಜಾಗೃತಿ ಮತ್ತು ದೃಢ ಸಂಕಲ್ಪದೊಂದಿಗೆ ಯಶಸ್ವಿಯಾಗಿ ನೆರವೇರಿತು.