ಹಸಿರು ಕ್ರಾಂತಿ ವರದಿ ಬೆಳಗಾವಿ
ಇನ್ಮುಂದೆ ಫೇಲ್ ಆದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಲು ವೇಳಾಪಟ್ಟಿಯನ್ನೇ ಎದುರು ನೋಡುತ್ತ ಕಾಯುವ ಅವಶ್ಯಕತೆ ಇರುವುದಿಲ್ಲ. ವಿದ್ಯಾರ್ಥಿಗಳು ಬಯಸಿದ ಸಮಯಕ್ಕೆ ಪರೀಕ್ಷೆ ಬರೆಯಬಹುದು. ಇದಕ್ಕಾಗಿಯೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಡಿಮ್ಯಾಂಡ್ ಬೇಸ್ ಎಕ್ಸಾಂ ಜಾರಿಗೆ ತರಲು ಮುಂದಾಗಿದೆ.
ಹೀಗಾಗಿ ಇನ್ಮುಂದೆ ವಿಶ್ವವಿದ್ಯಾಲಯ ಮರು ಪರೀಕ್ಷೆಯ ವೇಳಾಪಟ್ಟಿಗಾಗಿ ವಿದ್ಯಾರ್ಥಿಗಳು ಕಾಯ್ದು ಕುಳಿತುಕೊಳ್ಳುವ ಅವಶ್ಯಕತೆ ಎದುರಾಗುವುದಿಲ್ಲ. ತಾವು ಯಾವ ಸಮಯಕ್ಕೆ ಪರೀಕ್ಷೆ ಬರೆಯಲು ಸಿದ್ಧರಿದ್ದಿರೋ, ಆ ವೇಳೆಗೆ ಪರೀಕ್ಷೆ ಮಾಡಲು ವಿವಿಯು ಸಜ್ಜುಗೊಳ್ಳಲಿದೆ. ಆಚ್ಚರಿಯ ವಿಷಯ ಎಂದರೆ, ವಿದ್ಯಾರ್ಥಿಗಳು ಸಾರ್ವಜನಿಕ ರಜೆ ದಿನಗಳಲ್ಲೂ ಪರೀಕ್ಷೆ ಬರೆಯಲು ಬೇಡಿಕೆ ಮುಂದಿಡಬಹುದು.
ಇದು ಪರೀಕ್ಷೆ ಬರೆದು ಫೇಲ್ ಆಗಿ ಮತ್ತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆಯೇ ಹೊರತಾಗಿ ಹೊಸದಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅಲ್ಲ.
ರಾಜ್ಯದಲ್ಲಿರುವ ಸಾರ್ವಜನಿಕ ವಿಶ್ವವಿದ್ಯಾಲಯಗಳ ಪೈಕಿ ಇದೇ ಮೊದಲ ಬಾರಿಗೆ ವಿಟಿಯು ಈ ರೀತಿಯ ಒಂದು ಸಾಹಸಕ್ಕೆ ಕೈಹಾಕಿದೆ. ವಿಟಿಯು ವ್ಯಾಪ್ತಿಯಲ್ಲಿ 220 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಸದ್ಯ 3 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ವರ್ಷ ಅಂದಾಜು 70 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಪ್ರತಿ ಬಾರಿ ಪರೀಕ್ಷೆ ತೆಗೆದುಕೊಳ್ಳುವ ವೇಳೆಯಲ್ಲಿ ಅಂದಾಜು ಶೇ.20 ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಈ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾದಲ್ಲಿ ಆರೇಳು ತಿಂಗಳು ಕಾಯಬೇಕಾಗಿತ್ತು.
ಏಕ್ ವಿದ್ಯಾರ್ಥಿಗೂ ಅವಕಾಶ:
ಬೇಡಿಕೆ ಆಧಾರಿತ ಪರೀಕ್ಷೆ ಎಂದರೆ, ಇದಕ್ಕೆ ನಿಗದಿತ ವಿದ್ಯಾರ್ಥಿಗಳ ಸಂಖ್ಯೆಯ ಅವಶ್ಯಕತೆ ಇದ್ದರೇ ಮಾತ್ರ ಪರೀಕ್ಷೆ ಆಯೋಜಿಸುತ್ತಾರೆ ಎಂಬ ಕಲ್ಪನೆ ಬೇಡ. ಏಕೆಂದರೆ, ಒಬ್ಬ ವ್ಯಕ್ತಿ ಪರೀಕ್ಷೆ ತೆಗೆದುಕೊಳ್ಳುವುದಕ್ಕೆ ಇಚ್ಛಿಸಿದರೂ ಪರೀಕ್ಷೆ ನಡೆಸಲು ವಿಟಿಯು ನಿರ್ಧರಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಮಗೆ ಅನುಕೂಲವಾಗುವ ಸಮಯದಲ್ಲಿ ಪರೀಕ್ಷೆ ತೆಗೆದುಕೊಳ್ಳಬಹುದು. ಭಾನುವಾರ ಸಹ ಪರೀಕ್ಷೆ ಬರೆಯಬಹುದು. ಅದು ಸಹ ತಾನು ಇಚ್ಛಿಸಿದ ಪರೀಕ್ಷಾ ಕೇಂದ್ರದಲ್ಲೇ ಬರೆಯಬಹುದು.
ಸಿದ್ಧತೆ ಹೇಗೆ?:
ವಿದ್ಯಾರ್ಥಿಗಳಿಗೆ ಪರೀಕ್ಷೆ ದಿನಾಂಕ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ವಿಟಿಯು ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಯನ್ನು ಸಿದ್ಧಪಡಿಸುತ್ತದೆ. ಇದಕ್ಕಾಗಿ 500-600 ಪ್ರಶ್ನೆ ಪತ್ರಿಕೆಯ ಕೋಶವನ್ನು ವಿಟಿಯು ಹೊಂದಿದೆ. ಕೃತಕ ಬುದ್ಧಿಮತ್ತೆ ಬಳಕೆ ಮಾಡಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುತ್ತದೆ. ಇದಕ್ಕಾಗಿ ಅಗತ್ಯ ಸಿಬ್ಬಂದಿಯನ್ನು ವಿಟಿಯು ಸಜ್ಜುಗೊಳಿಸಿದೆ.
24 ಗಂಟೆಯಲ್ಲಿ ಫಲಿತಾಂಶ: ಈ ರೀತಿ ಬೇಡಿಕೆ ಆಧಾರಿತ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆದ 24 ಗಂಟೆಗಳೊಳಗೆ ಫಲಿತಾಂಶವನ್ನು ನೀಡಲು ವಿಟಿಯು ನಿರ್ಧರಿಸಿದೆ. ಹೀಗಾಗಿ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಮಯ ಕಾಯ್ದು ಕುಳಿತುಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ವಿದ್ಯಾರ್ಥಿಗಳಿಗೆ ಅನುಕೂಲ:
ವಿದ್ಯಾರ್ಥಿಗಳು ಕಾರಣಾಂತರಗಳಿಂದ ಪರೀಕ್ಷೆ ಬರೆಯಲು ಸಾಧ್ಯವಾಗದೇ ಇರಬಹುದು. ಇಂತಹ ವೇಳೆಯಲ್ಲಿ ಮತ್ತೆ ಪರೀಕ್ಷೆ ಬರೆಯುವುದಕ್ಕಾಗಿ ತಿಂಗಳಾರುಗಟ್ಟಲೆ ಕಾಯಬೇಕು. ಈ ಸಮಸ್ಯೆಯನ್ನು ನೀಗಿಸುವ ಸಲುವಾಗಿ ವಿಟಿಯು ಈ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ.
ನಮಗೆ ವಿದ್ಯಾರ್ಥಿಗಳ ಹಿತ ಕಾಯುವುದೇ ಮುಖ್ಯ. ಹೀಗಾಗಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಾನು ಈ ಬೇಡಿಕೆ ಆಧಾರಿತ ಪರೀಕ್ಷೆ ನಡೆಸಲು ನಿರ್ಧರಿಸಿದ್ದೇನೆ. ಇದಕ್ಕೆ ಅವಶ್ಯವಾದ ಸಕಲ ಸಿದ್ಧತೆಗಳನ್ನು ಸಹ ಮಾಡಿಕೊಂಡಿದ್ದೇವೆ. ಒಬ್ಬ ವಿದ್ಯಾರ್ಥಿ ಪರೀಕ್ಷೆ ತೆಗೆದುಕೊಂಡರೂ ಅವರಿಗೂ ನಾವು ಪರೀಕ್ಷೆ ನಡೆಸುತ್ತೇವೆ.
-ಪ್ರೊ.ಎಸ್.ವಿದ್ಯಾಶಂಕರ್, ಕುಲಪತಿ, ವಿಟಿಯು.