ಬಳ್ಳಾರಿ, ಏ.19: ಬಸವಣ್ಣನವರ ಬಹುಮುಖಿ ವ್ಯಕ್ತಿತ್ವವನ್ನು ಪರಿಚಯಿಸುವ ಡಾ.ತಿಪ್ಪೇರುದ್ರ ಅವರ “ಬುವಿಯ ಬೆಳಕು ಬಸವಣ್ಣ” ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಮೈತ್ರೇಯಿಣಿ ಗದಿಗೆಪ್ಪ ಗೌಡರ ಬಿಡುಗಡೆ ಮಾಡಿದ್ದಾರೆ.
ರಾಷ್ಟ್ರೀಯ ಬಸವದಳ ಹಾಗೂ ಬಸವ ಪಬ್ಲಿಕೇಶನ್ ಸಂಡೂರು ಸಂಯುಕ್ತಾಶ್ರಯದಲ್ಲಿ ನಗರದ ಬಸವ ಮಂಟಪದಲ್ಲಿ ನಿನ್ನೆ ಸಂಜೆ ನಡೆದ ಡಾ. ತಿಪ್ಪೇರುದ್ರ ಸಂಡೂರು ಅವರ “ಬುವಿಯ ಬೆಳಕು ಬಸವಣ್ಣ” ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಈ ಕೃತಿಯಲ್ಲಿ ವಿವಿಧ ಆಯಾಮಗಳಲ್ಲಿ ಬಸವಣ್ಣನವರನ್ನು ದರ್ಶಿಸುವ ಮೂಲಕ ತಮ್ಮ ಅಧ್ಯಯನದ ಅನುಭವವನ್ನು ಲೇಖಕರು ವಿಶಿಷ್ಟವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದರು.
ಸಂಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಬಿ ನಾಗನಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬಸವಣ್ಣನವರ ಚಿಂತನೆಗಳು ಎಂದೆಂದಿಗೂ ಅನುಸರಣಾ ಯೋಗ್ಯವಾಗಿವೆ. ಅವರು ಬಯಸಿದ್ದ ಶೋಷಣಾ ಮುಕ್ತ ಸಮಾಜ ನಿರ್ಮಾಣದ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಕೃತಿಯ ಲೇಖಕ ಡಾ. ತಿಪ್ಪೇರುದ್ರ ಸಂಡೂರು ಅವರು ಮಾತನಾಡಿ ಬಸವಾದಿ ಶರಣರ ವಚನಗಳ ಅಧ್ಯಯನದ ಫಲಶ್ರುತಿಯೇ ಈ ಕೃತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಬಸವದಳದ ಉಪಾಧ್ಯಕ್ಷ ಜಿ ಆರ್ ನಾಗರಾಜ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಜ್ಯೋತಿ ಪ್ರಕಾಶ್, ಜಿ ವೀರೇಶ್ ಸಂಡೂರು, ಸಿರಿಗೆರೆ ಪನ್ನರಾಜ್, ಬಿಎಸ್ ಪ್ರಭುಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ 2025 ನೇ ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿಗೆ ಭಾಜನರಾದ ಡಾ. ನಿಷ್ಠಿ ರುದ್ರಪ್ಪ ಅವರನ್ನು ಸನ್ಮಾನಿಸಲಾಯಿತು.
ನೂಪುರ ಕಲಾ ಟ್ರಸ್ಟ್ ನ ಡಾಕ್ಟರ್ ಕೆ ವೀಣಾ ಅವರು ತಂಡದಿಂದ ವಚನ ನೃತ್ಯವನ್ನು ನಡೆಸಿಕೊಟ್ಟರು.
ಬಸವ ದಳದ ಕಾರ್ಯದರ್ಶಿಗಳಾದ ಕೆವಿ ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಜಯಶ್ರೀ ವಚನ ಪ್ರಾರ್ಥನೆ ಸಲ್ಲಿಸಿದರು. ಟಿ. ಮಲ್ಲಿಕಾರ್ಜುನ ಅವರು ಸ್ವಾಗತಿಸಿ ವಂದನಾರ್ಪಣೆ ಸಲ್ಲಿಸಿದರು.


