ಧಾರವಾಡ,21 : ಜಿಲ್ಲೆಯಲ್ಲಿ 16 ರಿಂದ 35 ವರ್ಷದ ಯುವಕರನ್ನು ಸಂಘಟಿಸಿ, ಯುವಕರು ದಾರಿ ತಪ್ಪದೆ ಉತ್ತಮ ಜೀವನ ರೂಪಿಸಿಕೊಳ್ಳುವ ಹಾಗೂ ಸಮಾಜ ನಿರ್ಮಾಣದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ 249 ‘ಭಾರತ್ ಜೋಡೋ ಯುವ ಸಂಘ’ಗಳನ್ನು ರಚಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಮಧ್ಯಾಹ್ನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಭಾರತ ಜೋಡೋ ಯುವ ಸಂಘಗಳ ಸ್ಥಾಪನೆಗೆ ಜಿಲ್ಲೆಯ ಶಾಲಾ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಅಥವಾ ಯಾವುದೇ ಸರ್ಕಾರಿ ಕಚೇರಿಯ ಅಧಿಕಾರಿಗಳನ್ನು ಮೆಂಟರ್ ಮಾರ್ಗದರ್ಶಕರಾಗಿ ಗುರುತಿಸಿ ಆಯ್ಕೆ ಮಾಡಲಾದ ಅಧಿಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ, ಮಾತನಾಡಿದರು.
ಪ್ರತಿ ಸಂಘದಲ್ಲಿ ಕನಿಷ್ಠ 100 ಯುವಕರು ಇರಲಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಘಗಳನ್ನು ರಚಿಸಲಾಗುತ್ತಿದೆ. ಪ್ರತಿ ಸಂಘಕ್ಕೆ ಒಬ್ಬ ಮೆಂಟರ್ ಹಾಗೂ ಜಿಲ್ಲಾ ಮಟ್ಟದಲ್ಲಿ 10 ಮಾಸ್ಟರ್ ಟ್ರೈನರ್ಗಳನ್ನು ಗುರುತಿಸಲಾಗಿದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಸುಮಾರು 7,400 ಹಾಗೂ ನಗರ ಪ್ರದೇಶದಲ್ಲಿ ಸುಮಾರು 5,000 ಯುವಕರು ನೋಂದಣಿಯಾಗಿದ್ದು, ಒಟ್ಟು 25,000 ಯುವಕರ ನೋಂದಣಿ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
100 ಯುವಕರು ಸೇರ್ಪಡೆಯಾದ ಬಳಿಕ ಸಂಘದ ಮೊದಲ ಸಭೆ ನಡೆಸಿ, ತಾತ್ಕಾಲಿಕ ನಾಯಕನನ್ನು ಆಯ್ಕೆ ಮಾಡಿ, ನೋಂದಣಿ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಯುವಕರನ್ನು ಸಂಘಟಿಸಿ ಯುವ ಸಂಘಗಳನ್ನು ರಚಿಸಬೇಕು. ಸಂಘ ನೋಂದಣಿಯಾದ ಬಳಿಕ 15 ಜನರ ಕಾರ್ಯಕಾರಿ ಸಮಿತಿ ರಚಿಸಬೇಕು. ಇದರಲ್ಲಿ ಮಹಿಳೆಯರು, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಮಾನದಂಡಗಳಿವೆ ಎಂದು ಅವರು ತಿಳಿಸಿದರು.
ಯುವ ಸಂಘಗಳ ಮೂಲಕ ಕ್ರೀಡೆ, ಯೋಗಾಭ್ಯಾಸ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಬಹುದು. ಗ್ರಾಮದಲ್ಲಿನ ಸ್ವಚ್ಛತೆ ಸೇರಿದಂತೆ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಯುವಕರು ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಯುವ ಸಂಘಗಳ ಸದಸ್ಯರಿಗೆ ಮೆಂಟರ್ಗಳು ಸರಿಯಾದ ಮಾರ್ಗದರ್ಶನ ನೀಡಿ, ಯುವಕರನ್ನು ಉತ್ತಮ ಚಟುವಟಿಕೆಗಳತ್ತ ಕೊಂಡೊಯ್ಯಬೇಕು. ಪ್ರತಿ ಸಂಘಕ್ಕೆ ಸರ್ಕಾರದಿಂದ ವರ್ಷಕ್ಕೆ ರೂ 10 ಲಕ್ಷ ಅನುದಾನ ನೀಡಲಾಗುತ್ತಿದ್ದು, ನಿಗದಿತ ಮಾರ್ಗಸೂಚಿಗಳಂತೆ ಮಾತ್ರ ಹಣವನ್ನು ವೆಚ್ಚ ಮಾಡಬೇಕು. ಯುವಕರಿಗಾಗಿ ಆರೋಗ್ಯ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿದ್ದು, ಮಾರ್ಗಸೂಚಿಗಳು ಕಾಲಕಾಲಕ್ಕೆ ಬಿಡುಗಡೆಯಾಗಲಿವೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿüಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಯುವಕರ ಶಕ್ತಿ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಸದ್ಬಳಕೆ ಮಾಡುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಯುವ ಸಂಘಗಳ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ 13 ಸಾವಿರಕ್ಕೂ ಅಧಿಕ ಯುವಕರು ನೋಂದಣಿಯಾಗಿದ್ದು, ಸುಮಾರು 249 ಸಂಘಗಳು ರಚನೆಯಾಗಿವೆ ಎಂದು ಹೇಳಿದರು.
ಯುವ ಸಂಘಗಳ ರಚನೆ ಹಾಗೂ ಮುಂದಿನ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ಅನುಷ್ಠಾನಕ್ಕೆ ಮೆಂಟರ್ಸ್ಗಳ ಪಾತ್ರ ಮಹತ್ವದ್ದಾಗಿದೆ. ಸರ್ಕಾರದ ಮಾದರಿ ಬೈಲಾಸ್ ಹಾಗೂ ಮೆಮೊರಾಂಡಂ ಆಫ್ ಅಸೋಸಿಯೇಷನ್ (ಒoಂ) ಪ್ರಕಾರ ಮುಂದಿನ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚಿಸಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಯುವಕರನ್ನು ಉತ್ತಮ ಚಟುವಟಿಕೆಗಳಿಗೆ ತೊಡಗಿಸಿ, ಅವರ ಶಕ್ತಿಯನ್ನು ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಬಳಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಭಾರತ್ ಜೋಡೋ ಯುವ ಸಂಘಗಳ ಮೊದಲ ಹಾಗೂ ಎರಡನೇ ಸಾಮಾನ್ಯ ಸಭೆಯ ಬಳಿಕ 15 ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲಾಗುವುದು. ಇದರಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ವಿವಿಧ ಹುದ್ದೆಗಳಿದ್ದು, ಮಹಿಳೆಯರು ಹಾಗೂ ವಿವಿಧ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಲಾಗುವುದು. ಪ್ರತಿ ಸಂಘಕ್ಕೆ ಸರ್ಕಾರದಿಂದ ರೂ. 10 ಲಕ್ಷ ಅನುದಾನ ನೀಡಲಾಗುತ್ತಿದ್ದು, ರೂ. 2 ಲಕ್ಷ ಬಂಡವಾಳ ಹಾಗೂ ರೂ. 8 ಲಕ್ಷ ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕ್ರೀಡೆ, ಸಮುದಾಯ ಅಭಿವೃದ್ಧಿ, ಅರಣ್ಯ, ಪರಿಸರ, ಆರೋಗ್ಯ, ಸಂಸ್ಕøತಿ, ಸಾಮಾಜಿಕ ಕೌಶಲ್ಯ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶವಿದೆ. ಸಂಘಗಳ ಚಟುವಟಿಕೆಗಳ ಯೋಜನೆ ಹಾಗೂ ಅನುಷ್ಠಾನ ಕಾರ್ಯಕಾರಿ ಸಮಿತಿ ಮತ್ತು ಮೆಂಟರ್ಗಳು ಪ್ರಮುಖ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಪೆÇ್ರೀಬೇಶನರಿ ಐಎಎಸ್ ಅಧಿಕಾರಿ ಅನುಪ್ರೀಯಾ ಸಾಕ್ಯಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಮಹಾನಗರ ಪಾಲಿಕೆ ಆಡಳಿತದ ಉಪ ಆಯುಕ್ತೆ ಅನುರಾಧಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಹೆಚ್. ಅಮರಾಪೂರ, ಜಿಲ್ಲೆಯ 220 ಕ್ಕೂ ಹೆಚ್ಚು ಮೆಂಟರ್, ಮಾರ್ಗದರ್ಶಕರು ಹಾಗೂ ಜಿಲ್ಲೆಯ 12 ಮಾಸ್ಟರ್ ಟ್ರೇನರ್ಗಳು ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ಶಾಲಾಶಿಕ್ಷಣ ಇಲಾಖೆಯ ಡಿ.ವಾಯ್.ಪಿ.ಸಿ ಹಾಗೂ ಜಿಲ್ಲೆಯ ಮುಖ್ಯ ಮಾಸ್ಟರ್ ಟ್ರೇನರ್ಗಳಾದ ಹುಡೇದಮನಿಯವರು ಎಲ್ಲ ಮಾರ್ಗದರ್ಶಕರನ್ನು ಉದ್ದೇಶಿಸಿ ಭಾರತ ಜೋಡೋ ಯುವ ಸಂಘ ರಚನೆ ಹಾಗೂ ಉದ್ದೇಶದ ಬಗ್ಗೆ ವಿವರಣೆ ನೀಡಿದರು.