ಅಥಣಿ: "ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಕವಿವಾಣಿಯಂತೆ ಕನ್ನಡ ಭಾಷೆ, ನಾಡು, ನುಡಿ ಹಾಗೂ ಸಂಸ್ಕೃತಿಯ ಅಭಿಮಾನವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಅಥಣಿ ತಹಶೀಲ್ದಾರ್ ಸಿದರಾಯ ಭೋಸಗಿ ಹೇಳಿದರು.
ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು, ನಾಡದೇವಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದ ಬಳಿಕ ಅವರು ಮಾತನಾಡಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿ ಶ್ರಮಿಸಿದ ಎಲ್ಲ ಮಹನೀಯರನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸಬೇಕು. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಶರಣರು, ದಾಸರು ಹಾಗೂ ಸೂಫಿ ಸಂತರು ತಮ್ಮ ಸಾಹಿತ್ಯ, ವಚನಗಳು ಮತ್ತು ತತ್ವಪದಗಳ ಮೂಲಕ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ, ಅದು ನಮ್ಮ ನಾಡಿನ ಅಸ್ಮಿತೆ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಕನ್ನಡಿಗರು ಎಲ್ಲೇ ಇದ್ದರೂ ಕನ್ನಡ ಭಾಷೆಯ ಬಗ್ಗೆ ಗೌರವ, ಅಭಿಮಾನ ಹೊಂದಿ, ಅದರ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಪೊಲೀಸ್ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ನಡೆದ ಆಕರ್ಷಕ ಪಥಸಂಚಲನ ಮತ್ತು ಕವಾಯತು ವಿಶೇಷ ಗಮನ ಸೆಳೆದವು. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡದ ವೈಭವವನ್ನು ಬಿಂಬಿಸಿದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭದ ಮೆರುಗನ್ನು ಹೆಚ್ಚಿಸಿ ನೆರೆದಿದ್ದವರ ಕಣ್ಮನ ಸೆಳೆದವು.ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ, ಸದಸ್ಯರಾದ ಸಂತೋಷ ಸಾವಡಕರ, ರಾಜೂ ಗೂಡೊಡಗಿ, ಮಲ್ಲು ಹುದ್ದಾರ, ಮಲ್ಲಿಕಾರ್ಜುನ ಬುಟಾಳೆ, ಅಧಿಕಾರಿಗಳಾದ ಶಿವಾನಂದ ಕಲ್ಲಾಪೂರ, ಡಾ. ಬಸಗೌಡ ಕಾಗೆ, ಪ್ರವೀಣ ಹುಣಸಿಕಟ್ಟಿ, ಎಮ್ ಆರ್ ಮುಂಜೆ, ಸಿಪಿಐ ಸಂತೋಷ ಹಳ್ಳೂರ, ಸಿಪಿಐ ಲಕ್ಷ್ಮಣ ಅಗ್ನಿ, ಮಹಾದೇವ ಬಿರಾದಾರ, ನಿಂಗಣ್ಣ ಬಿರಾದಾರ, ರಾಮನಗೌಡ ಪಾಟೀಲ, ರಕ್ಷಣಾ ವೇದಿಕೆ ಅಧ್ಯಕ್ಷ ಶಬ್ಬೀರ ಸಾತಬಚ್ಚೆ, ಅಣ್ಣಾಸಾಹ ತೇಲಸಂಗ, ಉದಯ ಮಾಕಾಣಿ, ಸನ್ಮಾನಿತರಾದ ಸುಂದರ ಸೌದಾಗರ, ಪರಶುರಾಮ ನಂದೇಶ್ವರ, ಪ್ರಕಾಶ ಪೂಜಾರಿ, ರಾಮಣ್ಣ ದೊಡ್ಡನಿಂಗಪ್ಪಗೋ, ಡಿ ಬಿ ಠಕ್ಕಣ್ಣವರ, ಬಿ ಕೆ ರಾಠೋಡ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು