ಕೊಪ್ಪಳ : ನಗರಸಭೆ ಆವರಣದ ಬಲ್ಡೋಟ ತೊಲಗಿಸಿ ಭಾಗ್ಯನಗರ-ಕೊಪ್ಪಳ ಜನರ ಆರೋಗ್ಯ ಉಳಿಸಿ, ಕಾರ್ಖಾನೆ ಮಾಲಿನ್ಯ ನಿಯಂತ್ರಿಸಿ ಇಲ್ಲವೆ ಘಟಕ ಮುಚ್ಚಿ ಎನ್ನುವ ಆಗ್ರಹದೊಂದಿಗೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ (ಜಂಟಿ ಕ್ರಿಯಾ ವೇದಿಕೆ) ವತಿಯಿಂದ ನಡೆಸಲಾಗುತ್ತಿರುವ ಅನಿರ್ಧಿಷ್ಟಾವಧಿ ಧರಣಿ 293ನೇ ದಿನದಲ್ಲಿ ಮುಂದುವರೆಯಿತು.
ಬಸಾಪುರ ಗ್ರಾಮದ 44.35 ಎಕರೆ ವಿಸ್ತೀರ್ಣ ಇರುವ ಸಾರ್ವಜನಿಕ ಕೆರೆಯನ್ನು 2007ರಲ್ಲಿ ಬಲ್ಡೋಟ ಕಂಪನಿ ಅಕ್ರಮವಾಗಿ ಮಂಜೂರಾತಿ ಪಡೆದು 2024ರಿಂದ ಕೆರೆಯ ಸುತ್ತ ಬೃಹದಾಕಾರದ ಕಾಂಪೌಂಡ್ ನಿರ್ಮಾಣ ಮಾಡಿ ಸಾರ್ವಜನಿಕರ ನೀರಿನ ಬಳಕೆಯ ಹಕ್ಕನ್ನು ಕಸಿದುಕೊಂಡಿದೆ. ಕೆ.ಐ.ಎ.ಡಿಬಿಯಿಂದ ಭೂಸ್ವಾಧೀನ ಮಾಡಿಕೊಂಡ ಸಾವಿರಾರು ಎಕರೆಯಲ್ಲಿ ಬೇಕಾದರೆ ಕೆರೆ ಮಾಡಿಕೊಳ್ಳಬಹುದಿತ್ತು. ಇದನ್ನು ಹೊರತುಪಡಿಸಿ ಬಿಡಿಗಾಸು ಅಂದರೆ ಕೇವಲ 33ಲಕ್ಷ ಸರ್ಕಾರಕ್ಕೆ ಕೊಟ್ಟು ಕೆರೆ ಮಂಜೂರಿ ಪಡೆಯುವ ಯಾವುದೇ ಕಾನೂನು ನಿಯಮಗಳು ಇಲ್ಲದಿದ್ದಾಗ್ಯೂ ಕೆರೆ ಭೂಸ್ವಾಧೀನ ಮಾಡಿದ ಜಮೀನಿನ ಮಧ್ಯದಲ್ಲಿ ಬರುತ್ತದೆಂದು ಸುಳ್ಳು ಕತೆ ಕಟ್ಟಿ ಈಶಾನ್ಯ ಮೂಲೆಯಲ್ಲಿರಿವುದನ್ನು ವರದಿಯಲ್ಲಿ ಮರೆಮಾಚಲಾಗಿದೆ. ಆದರೆ ಎಂತಹ ಕಣ್ಣುತಪ್ಪಿಸುವ ವರದಿ ಇದ್ದಾಗಲೂ ಸರ್ವೆ ನಕ್ಷೆ ನೋಡಿದರೆ ಗೊತ್ತಾಗುತ್ತದೆ ಇದು ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿದ ಈಶಾನ್ನ ಮೂಲೆಯಲ್ಲಿದೆ ಎಂದು. ಇದರಲ್ಲಿ ಭ್ರಷ್ಟಾಚಾರ ಮೆಲುಗೈ ಪಡೆದದ್ದು ಗೊತ್ತಾಗುತ್ತದೆ. ಬರಗಾಲ ತಾಂಡವವಾಡಿದರೂ ಜಾನುವಾರುಗಳು ನೀರು ಕುಡಿಯಲು ಅನುಮತಿ ಕೊಡಲಿಲ್ಲ. ಹೈಕೋರ್ಟ್ ಆದೇಶ ಉಲ್ಲಂಘಿಸಿ ಕೆರೆ ಸುತ್ತ ಕಾಂಪೌಂಡ್ ಕಟ್ಟಲಾಗಿದೆ. ಜಾನುವಾರು ನೀರು ಕುಡಿಸಲು ರೈತರು ಮುಂದಾದಾಗಲೆಲ್ಲಾ ಕೆರೆಗೆ ಪೊಲೀಸ್ ರಕ್ಷಣೆ ಕೊಟ್ಟು ಸಾರ್ವಜನಿಕರ ನೀರು ಬಳಕೆಯ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ಚಳವಳಿ ರೂಪಿಸಿ ಕೆರೆಯನ್ನು ವಶಕ್ಕೆ ಪಡೆಯಲಾಗುವುದು ಎಂದು ಹೋರಾಟ ವೇದಿಕೆ ಹೇಳಿದೆ.
"ಗವಿಶ್ರೀಗಳು ಹೇಳಿದ್ದೇನು! ಜನಪ್ರತಿನಿದಿನಗಳು ಮಾಡಿದ್ದೇನು" ಎಂದು ಪ್ರಶ್ನೆ ಮಾಡುವುದಕ್ಕೆ ದಿ: 27.08.2026ರಂದು 301 "ಹೋರಾಟದ ನಡೆ ಶಾಸಕರ ಮನೆ ಕಡೆ" ಎನ್ನುವ ಹೋರಾಟ ಹಮ್ಮಿಕೊಳ್ಳಲಾಗಿದೆ. ಅಂದು ಇಲಕಲ್ಲ, ಚಿತ್ತರಗಿ ಮಠದ ಶ್ರೀ ಗುರು ಮಹಾಂತ ಸ್ವಾಮಿಗಳು ಕೊಪ್ಪಳ ಜನರ ಹೋರಾಟಕ್ಕೆ ಬೆಂಬಲಿಸಲು ಆಗಮಿಸುತ್ತಿದ್ದಾರೆ. ಅವರು ಆಡುವ ಮಾತುಗಳನ್ನು ಆಲಿಸಲು ನಗರದ ನಾಗರಿಕರು, ಬಾಧಿತ ಗ್ರಾಮಗಳ ರೈತರು ದೊಡ್ಡ ಸಂಖ್ಯೆಯಲ್ಲಿ ಧರಣಿ ಸ್ಥಳಕ್ಕೆ ಆಗಮಿಸಬೇಕೆಂದು ವೇದಿಕೆಯಿಂದ ವಿನಂತಿ ಮಾಡಲಾಗಿದೆ.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ರಾಜಶೇಖರ ಏಳುಭಾವಿ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೆನ ಕಲಕೇರಿ, ಬಸವರಾಜ ಹೂಗಾರ ಸಿಂದೋಗಿ, ಮಾಜಿ ಸೈನಿಕ ನಾಗರಾಜ ವೆಂಕಟಾಪುರ, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಕಾಳಪ್ಪ ಡಂಬಳ, ವಿಜಯಕುಮಾರ ಕನ್ನಾಡಿ, ಹನುಮೆಶ ಹರಿಜನ, ಗಂಗಮ್ಮ ಕುರುಗೋಡು ಮುಂತಾದ ಮಹಿಳೆಯರು ಇದ್ದರು.