ಬಳ್ಳಾರಿ, ಆ. 22; ಸಿರುಗುಪ್ಪ ತಾಲ್ಲೂಕಿನ 64-ಹಳೆಕೋಟೆ ಗ್ರಾಮದ ಸರ್ವೆ ನಂಬರ್ 83, 84, 85, 91ಬಿ, 92, 97 ಹಾಗೂ 126ಬಿಗೆ ಸೇರಿದ ಸುಮಾರು 75 ಎಕರೆ ಜಮೀನು ತಮ್ಮ ಕುಟುಂಬಕ್ಕೆ ಸೇರಿದ್ದು, ಇದಕ್ಕೆ ಸಂಬಂಧಿಸಿದ ನೋಂದಣಿ ದಾಖಲೆ, ಆರ್‌ಟಿಸಿ ಸೇರಿದಂತೆ ಎಲ್ಲ ದಾಖಲೆಗಳು ತಮ್ಮ ಬಳಿ ಇವೆ ಎಂದು ಯರ್ರಮ್ ಅಂಜಿರೆಡ್ಡಿ ಅವರ ಪುತ್ರ ಹನುಮರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳನ್ನು ಸಂಪರ್ಕಿಸಿ ಮಾತನಾಡಿದ ಅವರು, ಕೆಲವು ರೈತರು ಹಾಗೂ ರೈತ ಮುಖಂಡರು ತಮ್ಮ ಜಮೀನಿನ ಕುರಿತು ಸುಳ್ಳು ಮಾಹಿತಿ ನೀಡಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ತಮ್ಮ ತಂದೆ ಯರ್ರಮ್ ಅಂಜಿರೆಡ್ಡಿ ಹಾಗೂ ತಾಯಿ ಯರ್ರಮ್ ಕೋಟೇಶ್ವರಮ್ಮ ಅವರು 2014ರ ಮೇ 3ರಂದು ಈ ಜಮೀನನ್ನು ನ್ಯಾಯಯುತವಾಗಿ ಖರೀದಿಸಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಜಮೀನಿನ ಮೇಲಿನ ಹಕ್ಕು ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಕುಟುಂಬದ ಬಳಿ ಇವೆ ಎಂದು ಹೇಳಿದರು.
ಹರಾಜು ಪ್ರಕ್ರಿಯೆ ನಡೆದಿತ್ತು
ಈ ಹಿಂದೆ ಇದೇ ಜಮೀನನ್ನು ಮದ್ರಾಸ್‌ನ ಪುರಂ ಪ್ರಕಾಶ್‌ರಾವ್ ಅವರು ತಮ್ಮ ‘ಮೋಜೈಕ್ ಇಂಡಿಯಾ ಲಿಮಿಟೆಡ್’ ಸಂಸ್ಥೆಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಡಮಾನವಿಟ್ಟು ಸಾಲ ಪಡೆದಿದ್ದರು. ಸಾಲವನ್ನು ಸಕಾಲದಲ್ಲಿ ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬ್ಯಾಂಕ್ ಜಮೀನನ್ನು ಹರಾಜು ಹಾಕಿತ್ತು. ಹರಾಜಿನಲ್ಲಿ ಪಿ. ವೇಣುಗೋಪಾಲ್ ಅವರು ₹10 ಸಾವಿರಕ್ಕೆ ಬಿಡ್ ಮಾಡಿ ಶೇ.25ರಷ್ಟು ಮೊತ್ತವನ್ನು ಪಾವತಿಸಿದ್ದರು.
ಉಳಿದ ಮೊತ್ತವನ್ನು ನಿಗದಿತ ಅವಧಿಯಲ್ಲಿ ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆ ರದ್ದುಗೊಂಡಿತ್ತು. ಸುಮಾರು 14 ವರ್ಷಗಳ ಬಳಿಕ ಉಳಿದ ಮೊತ್ತ ಪಾವತಿಸಲು ವೇಣುಗೋಪಾಲ್ ಅವರು ಬ್ಯಾಂಕ್‌ನ್ನು ಸಂಪರ್ಕಿಸಿದಾಗ, ನಿಗದಿತ ಸಮಯದಲ್ಲಿ ಹಣ ಪಾವತಿಸದ ಕಾರಣ ಪ್ರಕ್ರಿಯೆ ರದ್ದಾಗಿದೆ ಎಂದು ಬ್ಯಾಂಕ್ ತಿಳಿಸಿತ್ತು. ಈ ವಿಚಾರವಾಗಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಅವರು ಮುಂಗಡವಾಗಿ ಪಾವತಿಸಿದ್ದ ಶೇ.25ರಷ್ಟು ಹಣವನ್ನು ಮರುಪಾವತಿಸುವಂತೆ ಬ್ಯಾಂಕ್‌ಗೆ ಆದೇಶಿಸಿತ್ತು ಎಂದು ಹನುಮರೆಡ್ಡಿ ವಿವರಿಸಿದರು.
ಸಾಲ ತೀರಿಸಿ ನೋ ಡ್ಯೂ ಸರ್ಟಿಫಿಕೇಟ್
ನಂತರ ಪುರಂ ಪ್ರಕಾಶ್‌ರಾವ್ ಹಾಗೂ ಪುರಂ ಪ್ರಭಾಕರ್‌ರಾವ್ ಅವರ ಮೊಮ್ಮಕ್ಕಳಾದ ಪಿ.ವಿ.ಆರ್. ಪ್ರಕಾಶ್ ಮತ್ತು ಪಿ.ವಿ.ಎಸ್. ಭಾರದ್ವಾಜ್ ಅವರಿಂದ ಜಿಪಿಎ ಮೂಲಕ ತಮ್ಮ ತಂದೆ ಜಮೀನಿನ ಹಕ್ಕು ಪಡೆದುಕೊಂಡಿದ್ದರು. ಜಮೀನಿನ ಮೇಲಿದ್ದ ಸಾಲವನ್ನು ಎಸ್‌ಬಿಐಗೆ ಪಾವತಿಸಿ ‘ನೋ ಡ್ಯೂ ಸರ್ಟಿಫಿಕೇಟ್’ ಪಡೆದುಕೊಳ್ಳಲಾಗಿತ್ತು. ಬಳಿಕ 2014ರಲ್ಲಿ ತಮ್ಮ ಕುಟುಂಬ ಜಮೀನನ್ನು ಖರೀದಿಸಿ ತಂದೆ ಅಂಜಿರೆಡ್ಡಿ ಹಾಗೂ ತಾಯಿ ಕೋಟೇಶ್ವರಮ್ಮ ಅವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದೆ ಎಂದು ಹೇಳಿದರು.
ಕೆಲವು ಕಾರಣಗಳಿಂದ ಜಮೀನಿನಲ್ಲಿ ನಿರಂತರವಾಗಿ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗಿಲ್ಲ. ಆದರೂ ಜಮೀನಿಗೆ ಸಂಬಂಧಿಸಿದ ತೆರಿಗೆಯನ್ನು ನಿಯಮಿತವಾಗಿ ಪಾವತಿಸುತ್ತಿದ್ದು, ಕಾಲಕಾಲಕ್ಕೆ ದಾಖಲೆಗಳನ್ನು ಪಡೆಯುತ್ತಾ ಬಂದಿದ್ದೇವೆ. ಜಮೀನು ನಮ್ಮ ಸ್ವಾಧೀನ ಮತ್ತು ಅನುಭವದಲ್ಲಿಯೇ ಇದೆ ಎಂದು ಹನುಮರೆಡ್ಡಿ ಹೇಳಿದರು.
ರೈತರನ್ನು ಪ್ರಚೋದಿಸಲಾಗುತ್ತಿದೆ: ಆರೋಪ
ಖಾಲಿ ಇರುವ ಜಮೀನಿನ ಮೇಲೆ ಕೆಲವರು ಕಣ್ಣಿಟ್ಟು, ಕೆಲವು ರೈತರನ್ನು ಪ್ರಚೋದಿಸಿ ‘ಹಲವು ವರ್ಷಗಳಿಂದ ಈ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇವೆ’ ಎಂದು ಹೇಳಿಸುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಇಂತಹ ಹೇಳಿಕೆಗಳು ಸತ್ಯಕ್ಕೆ ದೂರವಾಗಿದ್ದು, ಸಂಬಂಧಪಟ್ಟ ರೈತರಿಗೆ ತಮ್ಮ ಕುಟುಂಬದ ಜಮೀನಿನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹನುಮರೆಡ್ಡಿ ತಿಳಿಸಿದರು.
ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿದರೆ ನಿಜಾಂಶ ಸ್ಪಷ್ಟವಾಗಲಿದೆ. ಆದ್ದರಿಂದ ಆಧಾರರಹಿತ ಹೇಳಿಕೆಗಳ ಮೂಲಕ ಗೊಂದಲ ಸೃಷ್ಟಿಸದೆ, ದಾಖಲೆಗಳ ಆಧಾರದ ಮೇಲೆ ವಿಚಾರವನ್ನು ಬಗೆಹರಿಸಬೇಕು ಎಂದು ಅವರು ಮನವಿ ಮಾಡಿದರು.