ತಾಳಿಕೋಟೆ, ವ್ಯಾಪಾರಿ ಪಡಮೂಲ ಸ್ಥಳವಾದ ತಾಳಿಕೋಟೆ ಪಟ್ಟಣದಲ್ಲಿ ಸಮುದಾಯ ಆರೋಗ್ಯಕೇಂದ್ರವಿದ್ದು ಈಗಾಗಲೇ ತಾಳಿಕೋಟೆ ತಾಲೂಕಾ ಕೇಂದ್ರವಾಗಿ ದಶಕಗಳೇ ಕಳೆದರೂ ತಾಲೂಕಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವದು ಇನ್ನೂ ಕನಸ್ಸಾಗಿ ಉಳಿದುಕೊಂಡಿದೆ.
ಈಗಾಗಲೇ ೩೦ ಹಾಸಿಗೆಯ ಆಸ್ಪತೆಯಾಗಿ ಮುಂದುವರೆದಿದ್ದು ತಾಳಿಕೋಟೆ ಸುತ್ತಮುತ್ತಲೂ ನೂರಾರು ಗ್ರಾಮಗಳಿದ್ದರೂ ಎಲ್ಲ ಜನರೂ ತಾಳಿಕೋಟೆಯ ಆಸ್ಪತ್ರೆಯ ಮೇಲೆಯೇ ಅವಲಂಬಿಸಿದ್ದಾರೆ. ಇದರ ಜೊತೆಗೆ ಬ.ಬಾಗೇವಾಡಿ ತಾಲೂಕಿನ ಹುಣಸಗಿ, ಕೇಂಭಾವಿ, ದೇವರ ಹಿಪ್ಪರಗಿ, ಮುದ್ದೇಬಿಹಾಳ ತಾಲೂಕಿನ ಕೆಲವು ಗ್ರಾಮಗಳ ಜನರೂ ಕೂಡಾ ನಿತ್ಯ ವ್ಯಾಪಾರ ವಹಿವಾಟಿಗೆ ಆಗಮಿಸುವದರ ಜೊತೆಗೆ ಇದೇ ಆಸ್ಪತ್ರೆಯನ್ನೇ ಅವಲಂಬಿಸುತ್ತಾ ಸಾಗಿದ್ದಾರೆ.
ಇದು ಅಲ್ಲದೇ ೧೮ ಕಿಲೋ ಮೀಟರ್ ಅಂತರದಲ್ಲಿರುವ ಮಡಿಕೆಶ್ವರ, ತಮದಡ್ಡಿ, ಸಾಸನೂರ, ಕಾರಗನೂರ, ಭಂಟನೂರ, ಅಸ್ಕಿ, ಕಲಕೇರಿ, ಕೊಣ್ಣೂರ ಈ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ಇನ್ನೂ ಅಗತ್ಯ ಸೌಲಭ್ಯಕ್ಕಾಗಿ ತಾಳಿಕೋಟೆಯ ಈಗಿನ ಸಮುದಾಯ ಆರೋಗ್ಯ ಕೇಂದ್ರದ ಮೇಲೇ ಅವಲಂಬಿಸುತ್ತಾ ಸಾಗಿದ್ದಾರೆ. ದಿನನಿತ್ಯ ಬರುಹೋಗುವ ಹೊರರೋಗಿಗಳ ಸಂಖ್ಯೆ ಸುಮಾರು ೫೦೦ ಕ್ಕೂ ಮೇಲ್ಪಟ್ಟು ಹೆಚ್ಚುತ್ತಾ ಸಾಗಿದೆ ಈ ಎಲ್ಲ ತೊಂದರೆಗಳ ನಿವಾರಣೆಗಾಗಿ ತಾಳಿಕೋಟೆ ತಾಲೂಕಾ ಆಸ್ಪತೆಯಾಗಿ ಮಾರ್ಪಟ್ಟರೆ ೧೦೦ ಬೆಡ್ ಆಸ್ಪತ್ರೆಯಾಗಿ ಪರಿಣಮಿಸಿ ಇನ್ನೂ ಅಗತ್ಯ ಸೌಲಭ್ಯಗಳು ಸಾರ್ವಜನಿಕರಿಗೆ ಹಾಗೂ ಆಸ್ಪತ್ರೆಯ ಬರುಹೋಗುವ ರೋಗಿಗಳಿಗೆ ದೊರೆಯಲಿದೆ.
ಇದು ಅಲ್ಲದೇ ಅಗತ್ಯವಾದ ಸಲಕರಣೆಗಳು ಸಹ ಈ ಆಸ್ಪತ್ರೆಯಲ್ಲಿ ಲಭ್ಯವಾಗಿರದ ಕಾರಣ ದೂರದ ಆಸ್ಪತ್ರೆಗಳಾದ ವಿಜಯಪುರ, ಬಾಗಲಕೋಟ, ಹುಬ್ಬಳ್ಳಿ, ಮಿರೇಜ ಗಳಂತ ಪ್ರಮುಖ ನಗರ ಪಟ್ಟಣಗಳಿಗೆ ಅಲೆದಾಡುತ್ತಿದ್ದ ಹೊರ ಹಾಗೂ ಒಳ ರೋಗಿಗಳಿಗೆ ಅನುಕೂಲವಾಗಬೇಕಾದರೆ ತಾಳಿಕೋಟೆ ತಾಲೂಕಾ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವದರೊಂದಿಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸಬೇಕೆಂದು ನಾಗರಿಕರ ಒತ್ತಾಸೆಯಾಗಿದೆ.
ತಾಳಿಕೋಟೆ ತಾಲೂಕಾ ಆಸ್ಪತ್ರೆಯಾಗಿ ಪರಿಣಮಿಸಿದಲ್ಲಿ ಹೆಚ್ಚಿನ ವೈದ್ಯಕೀಯ ಸೌಲಭ್ಯಗಳು ತಜ್ಞವೈದ್ಯರು ಹಾಗೂ ಅಗತ್ಯ ಸಿಬ್ಬಂದಿ ಆಧುನಿಕ ಚಿಕಿತ್ಸಾ ವ್ಯವಸ್ಥೆಗಳನ್ನು ಕಲ್ಪಿಸಲು ಅನುಕೂಲವಾಗುತ್ತದೆ ಬಡ ಹಾಗೂ ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ಉತ್ತಮವಾದ ಆರೋಗ್ಯ ದೊರೆಯಲಿದ್ದು ಶೀಘ್ರದಲ್ಲಿಯೇ ಈಗಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವದು ಅಗತ್ಯವಾಗಿದೆ.
ಈಗಾಗಲೇ ಈ ಆಸ್ಪತ್ರೆಯಲ್ಲಿ ೩೦ ಜನ ಸಿಬ್ಬಂದಿಯವರು ಕಾರ್ಯ ನಿರ್ವಹಿಸಬೇಕಾಗಿದ್ದು ಈಗ ಕೇವಲ ೧೮ ಸಿಬ್ಬಂದಿ ವರ್ಗದವರು ಸೇವೆಗೆ ಮುಂದಾಗಿದ್ದಾರೆ ಈಗಾಗಲೇ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರು, ಪ್ರಸೂತಿ ತಜ್ಞರು, ಚಿಕ್ಕಮಕ್ಕಳ ತಜ್ಞರು, ಎಕ್ಸರೇ ತಜ್ಞರು ಕಾರ್ಯನಿರ್ವಹಿಸುತ್ತಿದ್ದು ತಾಲೂಕಾ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೆ ಇನ್ನೂ ಅಗತ್ಯ ಬೇಕಾಗಿರುವಂತಹ ಎಲಬುಕೀಲು ತಜ್ಷರು, ಚರ್ಮರೋಗ ತಜ್ಞರು, ಜನರಲ್ ಸರ್ಜರಿ, ದಂತ ವೈದ್ಯರು, ಜನರಲ್ ಫಿಜಿಷಿಯನ್ ಒಳಗೊಂಡು ಇನ್ನಿತರ ವೈಧ್ಯ ಸಿಬ್ಬಂದಿಯ ಸೇವೆ ಎಲ್ಲ ಬಡ ರೋಗಿಗಳ ಪಾಲಿಗೆ ಸಿಕ್ಕಂತಾಗುವದಲ್ಲದೇ ವರದಾನವೂ ಆಗಲಿದೆ.
ಕಾರಣ ತಾಳಿಕೋಟೆ ತಾಲೂಕಾ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸುತ್ತಮುತ್ತಲಿನ ಸುಮಾರು ನೂರಾರು ಗ್ರಾಮಗಳ ಗ್ರಾಮಸ್ಥರರಿಗೆ ಹಾಗೂ ಬರುಹೋಗುವ ರೋಗಿಗಳಿಗೆ ಅನುಕೂಲ ಕಲ್ಪಿಸುವಂತಹ ವ್ಯವಸ್ಥೆಯನ್ನು ಆರೋಗ್ಯ ಸಚಿವರಾಗಲಿ ಅಥವಾ ಜಿಲ್ಲಾ ಆರೋಗ್ಯ ಅಧಿಕಾರಿಗಳಾಗಲಿ ಈ ಭಾಗದತ್ತ ಗಮನ ಹರಿಸಿ ಸಾರ್ವಜನಿಕರಿಗೆ ಹಾಗೂ ಗ್ರಾಮಸ್ಥರರಿಗೆ ಇನ್ನೂ ಹೆಚ್ಚಿಗೆ ಅನುಕೂಲ ಕಲ್ಪಿಸಿ ಬರ ರೋಗಿಗಳ ಪಾಲಿಗೆ ಸಂಜೀವಿನಿ ಆಗುತ್ತಾರೋ ಕಾದು ನೋಡಬೇಕಿದೆ.
ಈ ಹಿಂದೆಯೇ ತಾಳಿಕೋಟೆ ತಾಲೂಕಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಸಲುವಾಗಿ ೧೦೦ ಬೆಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಸಲುವಾಗಿ ಸರ್ಕಾರದಿಂದ ಮಾಹಿತಿ ಕೇಳಿದಂತೆ ಪ್ರಪೋಜಲ್‌ನ್ನು ನಮ್ಮ ಜಿಲ್ಲಾ ಆರೋಗ್ಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಡಾ.ಸತೀಶ ತಿವಾರಿ ತಾಲೂಕಾ ಆರೋಗ್ಯ ಅಧಿಕಾರಿ.
ಈಗಾಗಲೇ ತಾಳಿಕೋಟೆ ತಾಲೂಕಾಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಬೇಕೆಂದು ತಾಲೂಕಿನ ನಾಗರಿಕರ ವತಿಯಿಂದ ರಾಜ್ಯ ಆರೋಗ್ಯ ಇಲಾಖೆಗೆ ಹಾಗೂ ಜನಪ್ರತಿನಿಧಿಗಳಿಗೆ ತಾಲೂಕಿನ ಸಂಖ್ಯೆಗಳ ಮಾನದಂಡದ ಆಧಾರದ ಮೇಲೆ ಮತ್ತು ಆಸ್ಪತ್ರೆಗೆ ನಿತ್ಯ ಆಗಿಸುವ ರೋಗಿಗಳ ಸಂಖ್ಯೆಯ ಮಾನದಂಡದ ಮೇಲೆ ಮನವಿಯನ್ನು ಸಲ್ಲಿಸುತ್ತಾ ಬಂದಿದ್ದೇವೆ ಇನ್ನೂವರೆಗೂ ಯಾವುದೇ ರೀತಿಯ ಕ್ರಮ ಸರ್ಕಾರ ಕೈಗೊಂಡಿಲ್ಲಾ ಕೂಡಲೇ ತಾಲೂಕಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಬಡರೋಗಿಗಳ ನೆರವಿಗೆ ಬರುವಂತಹ ಕಾರ್ಯವಾಗಬೇಕು.
ಡಾ.ರವಿ ಅಗರವಾಲಾ ವೈಧ್ಯರು ತಾಳಿಕೋಟೆ.