ಕೊಪ್ಪಳ ಜೂನ್ 17: ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿನ ನೀರು ಸಂಗ್ರಹ ಮತ್ತು ನೀರಿನ ಮೂಲಗಳ ಸ್ವಚ್ಛತೆಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ ಅವರು ಸಂಬಧಿಂಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೊಪ್ಪಳ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಛೇರಿ ಸಭಾಂಗಣದಲ್ಲಿ ಮಂಗಳವಾರ (ಜೂ. 16ರಂದು) ಹಮ್ಮಿಕೊಂಡಿದ್ದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ (ಡಿ.ಡಬ್ಲ್ಯು.ಎಸ್.ಎಂ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಈ ಅವಧಿಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ ನೀರಿನ ಮೂಲಗಳ ಸ್ವಚ್ಛ ಮತ್ತು ಶುಚಿತ್ವ ಕಾಪಾಡಿಕೊಳ್ಳಬೇಕು. ಜಿಲ್ಲೆಯಾದ್ಯಂತ ಎಲ್ಲಾ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಂಗ್ರಹಣೆ ಮೂಲಗಳಾದ ಓ.ಹೆಚ್.ಟಿ ಟ್ಯಾಂಕ್, ಸಣ್ಣ ನೀರಿನ ಟ್ಯಾಂಕ್ ಸೇರಿದಂತೆ ಇತರ ಕುಡಿಯುವ ನೀರು ಸಂಗ್ರಹಗಳ ಸ್ವಚ್ಛತೆಗೆ ಒತ್ತು ಕೊಡಬೇಕು. ಯಾವುದೇ ಪೈಪ್ ಲೈನ್ ಹೊಡೆದು ಹೋಗಿದ್ದಲ್ಲಿ, ಅದನ್ನು ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಬೋರ್ ವೆಲ್ ಗಳಲ್ಲಿ ಅಥವಾ ನೀರು ಪೂರೈಕೆ ಪೈಪುಗಳಲ್ಲಿ ಕಲುಷಿತ ನೀರು ಸೇರಿದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರನ್ನು ಕಡ್ಡಾಯವಾಗಿ ಪರೀಕ್ಷಿಸಿದ ಬಳಿಕವೇ ಪೂರೈಸಲು ಕ್ರಮ ವಹಿಸಬೇಕು. ಪರೀಕ್ಷೆಯಲ್ಲಿ ನೀರು ಕುಡಿಯಲು ಯೋಗ್ಯವಿಲ್ಲವೆಂದು ಕಂಡುಬಂದಲ್ಲಿ ತಕ್ಷಣ ಅಂತಹ ನೀರು ಪೂರೈಕೆಯನ್ನು ತಡೆಯಲು ತ್ವರಿತ ಕ್ರಮವಹಿಸಬೇಕು. ಕುಡಿಯಲು ಯೋಗ್ಯವಿಲ್ಲದ ಬೋರ್ ವೆಲ್ ಗಳನ್ನು ಸ್ಥಗಿತಗೊಳಿಸಬೇಕು. ಅಂತಹ ಗ್ರಾಮಗಳಿಗೆ ಟ್ಯಾಂಕರ್ ಮುಖಾಂತರವೇ ನಿರಂತರ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ನಳದ ಸಂಪರ್ಕ ಕಲ್ಪಿಸುವ ನೀರು ಪೂರೈಕೆ ಮಾಡಲಾಗುತ್ತದೆ. ವಿವಿಧ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಅಪೂರ್ಣಗೊಂಡಿದ್ದಲ್ಲಿ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ವಹಿಸಿ. ಜಿಲ್ಲೆಯಲ್ಲಿ ಯಾವುದೇ ರೀತಿಯ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಂಡು, ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು. ಕುಡಿಯುವ ನೀರು ಯೋಜನೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಪೈಕಿ ಬಾಕಿ ಇರುವ ಟ್ಯಾಂಕ್ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ, ವಿದ್ಯುತ್ ಸಂಪರ್ಕ ಸೇರಿದಂತೆ ಇತರೆ ಮುಕ್ತಾಯ ಹಂತದ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೊಪ್ಪಳ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಮಹೇಶ ಶಾಸ್ತ್ರೀ ಸೇರಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ವಿಭಾಗಗಳ ಎಇಇಗಳು, ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ (ಡಿ.ಡಬ್ಲ್ಯು.ಎಸ್.ಎಂ) ಸಮಿತಿಯ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
