ಮಹಾಲಿಂಗಪುರ,ಅ,೨೦ : ಬಹುದಿನಗಳ ಬೇಡಿಕೆಯಾಗಿರುವ ಮಹಾಲಿಂಗಪುರವನ್ನು ನೂತನ ತಾಲೂಕು ಕೇಂದ್ರವನ್ನಾಗಿ ರಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದು ಇಡಲಾಗಿದೆ. ತಾಲೂಕು ಕೇಂದ್ರ ರಚನೆಗೆ ಅಗತ್ಯವಿರುವ ಎಲ್ಲ ರೀತಿಯ ಮೂಲಸೌಕರ್ಯ, ಜನಸಂಖ್ಯೆ, ವ್ಯಾಪಾರ-ವಹಿವಾಟು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಂಪರ್ಕ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಮಹಾಲಿಂಗಪುರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಕೋರಿ ತಹಶೀಲ್ದಾರ್ ಗಿರೀಶ್ ಸ್ವಾಧಿ ಅವರು ಜಮಖಂಡಿ ಉಪವಿಭಾಗಾಧಿಕಾರಿಗಳಿಗೆ ಬುಧವಾರ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಮಹಾಲಿಂಗಪುರವನ್ನು ತಾಲೂಕು ಕೇಂದ್ರವನ್ನಾಗಿ ರಚಿಸಬೇಕೆಂಬುದು ಈ ಭಾಗದ ಜನರ ಬಹುಕಾಲದ ಪ್ರಮುಖ ಬೇಡಿಕೆಯಾಗಿದೆ. ಮಹಾಲಿಂಗಪುರ ಪಟ್ಟಣವು ಸುತ್ತಮುತ್ತಲಿನ ಗ್ರಾಮಗಳಿಗೆ ಶೈಕ್ಷಣಿಕ, ವ್ಯಾಪಾರ, ಆರೋಗ್ಯ, ಕೃಷಿ ಹಾಗೂ ಆಡಳಿತಾತ್ಮಕವಾಗಿ ಪ್ರಮುಖ ಕೇಂದ್ರವಾಗಿ ಬೆಳೆದಿದ್ದು, ಪ್ರತಿನಿತ್ಯ ಸಾವಿರಾರು ಜನರು ವಿವಿಧ ಕೆಲಸಗಳಿಗಾಗಿ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಜನರಿಗೆ ಆಡಳಿತಾತ್ಮಕ ಸೇವೆಗಳು ಮತ್ತ? ಸುಲಭವಾಗಿ ದೊರೆಯುವಂತೆ ಮಹಾಲಿಂಗಪುರವನ್ನು ಪ್ರತ್ಯೇಕ ತಾಲೂಕು ಕೇಂದ್ರವನ್ನಾಗಿ ರಚಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
೨೦೧೧ರ ಜನಗಣತಿ ಪ್ರಕಾರ ಮಹಾಲಿಂಗಪುರದ ಜನಸಂಖ್ಯೆ ೧,೧೨,೧೫೦ ಆಗಿದ್ದು, ಇ? ದೊಡ್ಡ ಜನಸಂಖ್ಯೆ ಹೊಂದಿರುವ ಪ್ರದೇಶಕ್ಕೆ ಪ್ರತ್ಯೇಕ ತಾಲೂಕು ಸ್ಥಾನಮಾನ ನೀಡುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ತಾಲೂಕು ಕೇಂದ್ರವಾದಲ್ಲಿ ಕಂದಾಯ, ಕೃಷಿ, ಶಿಕ್ಷಣ, ಆರೋಗ್ಯ, ಪೊಲೀಸ್, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಸ್ಥಾಪನೆಯಾಗುವ ಸಾಧ್ಯತೆಯಿದ್ದು, ಜನರು ತಮ್ಮ ಕೆಲಸಗಳಿಗಾಗಿ ದೂರದ ತಾಲೂಕು ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ತಪ್ಪಲಿದೆ.ಮಹಾಲಿಂಗಪುರದ ಸುತ್ತಮುತ್ತಲಿನ ಚಿಮ್ಮಡ,ಕೆಸರಗೋಪ್ಪ, ಬುದ್ನಿ ಪಿಡಿ ,ಬಿಸನಾಳ, ಸೈದಾಪುರ, ಮಾರಾಪುರ, ಸಂಗಾನಟ್ಟಿ, ಮಧಬಾವಿ, ಢವಳೇಶ್ವರ, ನಂದಗಾಂವ ಸೇರಿದಂತೆ ಹಲವು ಗ್ರಾಮಗಳು ಆಡಳಿತಾತ್ಮಕವಾಗಿ ಮಹಾಲಿಂಗಪುರದೊಂದಿಗೆ ನಿಕಟ ಸಂಪರ್ಕ ಹೊಂದಿವೆ. ಈ ಗ್ರಾಮಗಳ ಜನರು ಶಿಕ್ಷಣ, ವ್ಯಾಪಾರ, ಕೃಷಿ ಉತ್ಪನ್ನಗಳ ಮಾರಾಟ, ಆರೋಗ್ಯ ಸೇವೆ ಹಾಗೂ ಇತರ ಅಗತ್ಯ ಕಾರ್ಯಗಳಿಗಾಗಿ ಮಹಾಲಿಂಗಪುರವನ್ನೇ ಅವಲಂಬಿಸಿದ್ದಾರೆ.ಅಲ್ಲದೇ, ಮುಧೋಳ ತಾಲೂಕಿನ ಬೆಳಗಲಿ,ಅಕ್ಕಿಮರಡಿ, ಮಿರ್ಜಿ, ಮಲ್ಲಾಪುರ, ನಾಗರಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೂ ಮಹಾಲಿಂಗಪುರ ಪ್ರಮುಖ ವಾಣಿಜ್ಯ ಹಾಗೂ ಸಂಪರ್ಕ ಕೇಂದ್ರವಾಗಿದೆ. ಕೃಷಿ ಪ್ರಧಾನ ಪ್ರದೇಶವಾಗಿರುವುದರಿಂದ ರೈತರು ತಮ್ಮ ಉತ್ಪನ್ನಗಳ ಮಾರಾಟ, ಕೃಷಿ ಸಂಬಂಧಿತ ಸೇವೆಗಳು ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳಿಗಾಗಿ ಮಹಾಲಿಂಗಪುರಕ್ಕೆ ಆಗಮಿಸುತ್ತಾರೆ. ಹೀಗಾಗಿ ಭೌಗೋಳಿಕವಾಗಿ ಹಾಗೂ ಜನಸಂಖ್ಯೆಯ ದೃಷ್ಟಿಯಿಂದಲೂ ಮಹಾಲಿಂಗಪುರವನ್ನು ತಾಲೂಕು ಕೇಂದ್ರವನ್ನಾಗಿ ಪರಿಗಣಿಸಲು ಸೂಕ್ತ ವಾತಾವರಣವಿದೆ.
ತಾಲೂಕು ರಚನೆಯಾದಲ್ಲಿ ಈ ಭಾಗದ ಆಡಳಿತ ವಿಕೇಂದ್ರೀಕರಣಕ್ಕೆ ವೇಗ ಸಿಗುವುದರ ಜೊತೆಗೆ ಸರ್ಕಾರಿ ಕಚೇರಿಗಳು ಜನರ ಮನೆಬಾಗಿಲಿಗೆ ಹತ್ತಿರವಾಗಲಿವೆ. ರೈತರು, ಮಹಿಳೆಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಹಾಗೂ ವಿವಿಧ ವರ್ಗದ ಜನರು ಸರ್ಕಾರಿ ಸೇವೆಗಳನ್ನು ಪಡೆಯಲು ದೂರದ ಪ್ರದೇಶಗಳಿಗೆ ತೆರಳುವ ಸಮಯ ಮತ್ತು ಹಣದ ಉಳಿತಾಯವಾಗಲಿದೆ.
ಮಹಾಲಿಂಗಪುರ ಪಟ್ಟಣವು ಈಗಾಗಲೇ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬ್ಯಾಂಕ್‌ಗಳು, ಮಾರುಕಟ್ಟೆ, ವ್ಯಾಪಾರ ಮಳಿಗೆಗಳು ಹಾಗೂ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವುದರಿಂದ ತಾಲೂಕು ಕೇಂದ್ರ ರಚನೆಗೆ ಬೇಕಾದ ಮೂಲ ಸೌಲಭ್ಯಗಳನ್ನು ಹೊಂದಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಹಶೀಲ್ದಾರ್ ಗಿರೀಶ್ ಸ್ವಾಮಿ ಅವರು ಸಲ್ಲಿಸಿರುವ ಪ್ರಸ್ತಾವನೆಗೆ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಮಹಾಲಿಂಗಪುರಕ್ಕೆ ತಾಲೂಕು ಸ್ಥಾನಮಾನ ನೀಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಬಹುದಿನಗಳ ಕನಸಾಗಿರುವ ಮಹಾಲಿಂಗಪುರ ತಾಲೂಕು ರಚನೆಗೆ ಇದೀಗ ಅಧಿಕೃತ ಪ್ರಸ್ತಾವನೆ ಸಲ್ಲಿಕೆಯಾಗಿರುವುದು ಈ ಭಾಗದ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಮಹಾಲಿಂಗಪುರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.