ಇಂಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ವತಿಯಿಂದ ಇಂಡಿ ತಾಲೂಕಿನಲ್ಲಿ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಗಣ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆಯೊಂದಿಗೆ ನೆರವೇರಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಶೈಲಜಾ ತೆಲ್ಲೂರು ಅವರು ಮಾತನಾಡಿ, ಮಹಿಳೆಯರು ಕುಟುಂಬದ ಅಭಿವೃದ್ಧಿಯ ಜೊತೆಗೆ ಸಮಾಜದ ಪ್ರಗತಿಯಲ್ಲಿಯೂ ಪ್ರಮುಖ ಪಾತ್ರ ವಹಿಸಬೇಕು. ಮಹಿಳೆಯರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಸಾಮಾಜಿಕ ಅರಿವು ಬೆಳೆಸುವಲ್ಲಿ ಇಂತಹ ವಿಚಾರಗೋಷ್ಠಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಂಡಿ ಉಪವಿಭಾಗಾಧಿಕಾರಿ ಶ್ರೀ ಚಿದಾನಂದ ಗುರುಸ್ವಾಮಿ ಅವರು ಮಹಿಳೆಯರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಮಹತ್ವದ ಕುರಿತು ಮಾತನಾಡಿದರು.ಮತ್ತು ಈ ವರ್ಷದಲ್ಲಿ ಮಂಜೂರಾತಿಯಾಗಿರುವ ಪದವೀಧರ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಮಾಡಿದರು ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು ಮತ್ತು ಪೂಜರಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಓದಲು ಅವಕಾಶ ಸಿಕ್ಕಿದೆ ಎಂದು ತಿಳಿಸಿದರು
ಕ್ಷೇತ್ರ ಯೋಜನಾಧಿಕಾರಿ ಶ್ರೀ ನಟರಾಜ್ ಎಲ್.ಎಂ. ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳೆಯರ ಸಂಘಟನೆ, ಸ್ವಾವಲಂಬನೆ ಹಾಗೂ ಸಬಲೀಕರಣಕ್ಕಾಗಿ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಗಂಗೂಬಾಯಿ ಗಲಿಗಲಿ ಅವರು ಮಹಿಳೆಯರ ಹಕ್ಕುಗಳು, ಕರ್ತವ್ಯಗಳು, ಸಾಮಾಜಿಕ ಜವಾಬ್ದಾರಿ ಹಾಗೂ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಕುರಿತು ವಿಚಾರ ಮಂಡಿಸಿದರು.
ವಿಚಾರಗೋಷ್ಠಿಯ ಜೊತೆಗೆ ಮಹಿಳೆಯರ ಮನರಂಜನೆ ಹಾಗೂ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮ್ಯೂಸಿಕಲ್ ಚೇರ್, ಬಿಸ್ಕೆಟ್ ಗೇಮ್, ರಂಗೋಲಿ ಸ್ಪರ್ಧೆ, ಬಣ್ಣಬಣ್ಣದ ಆರತಿ ತಟ್ಟೆಗಳ ಸ್ಪರ್ಧೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಹಿಳೆಯರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಮತ್ತು ಯೋಜನೆಯ ಮುಖಾಂತರ ಬ್ಯಾಂಕಿನಿಂದ ಪ್ರಗತಿ ನಿಧಿ ಸಾಲ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಣುಕಾ, ವಲಯದ ಮೇಲ್ವಿಚಾರಕಿ ಸರಸ್ವತಿ, ತಾಲೂಕು ವೀಕ್ಷಣಾಧಿಕಾರಿ ಸಿದ್ದಪ್ಪ, ನೋಡಲ್ ಅಧಿಕಾರಿ ರಮೇಶ, ಜ್ಞಾನವಿಕಾಸ ಸಂಯೋಜಕಿಯರು ಹಾಗೂ ವಿವಿಧ ಕೇಂದ್ರಗಳ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಮಹಿಳೆಯರಲ್ಲಿ ಜಾಗೃತಿ, ಆತ್ಮವಿಶ್ವಾಸ, ಸಂಘಟನಾ ಶಕ್ತಿ ಹಾಗೂ ಸುಪ್ತ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.